ಮಾನ್ವಿ: ತಾಲೂಕಿನ ಅಡವಿ ಅಮರೇಶ್ವರ ಗ್ರಾಮದ ಶ್ರೀ ಸುವರ್ಣಗಿರಿ ವಿರಕ್ತಮಠದಲ್ಲಿ ಲಿಂ. ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ 159ನೇ ಜಯಂತಿ ಅಂಗವಾಗಿ ಆಗಮಿಸಿದ ರಥಯಾತ್ರೆಯನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
ಶ್ರೀಮಠದ ಶ್ರೀ ತೋಟದಾರ್ಯ ಮಹಾಸ್ವಾಮಿಗಳು ರಥಯಾತ್ರೆಯನ್ನು ಸ್ವಾಗತಿಸಿ ಆಶೀರ್ವಚನ ನೀಡಿದರು. ಲಿಂ. ಶ್ರೀ ಹಾನಗಲ್ ಕುಮಾರ ಶಿವಯೋಗಿಗಳು ವೀರಶೈವ ಲಿಂಗಾಯತ ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ಮಹಾನ್ ಶಿವಯೋಗಿಗಳಾಗಿದ್ದರು. ಶಿವಯೋಗ ಮಂದಿರದ ಮೂಲಕ ಸಮಾಜಕ್ಕೆ ಧಾರ್ಮಿಕ ಸಂಸ್ಕಾರ ನೀಡುವುದರ ಜೊತೆಗೆ ಅನೇಕ ಮಠಗಳಿಗೆ ಸ್ವಾಮಿಗಳನ್ನು ರೂಪಿಸಿ ನೀಡಿದರು. ಅವರ ಸಮಾಜಸೇವೆ, ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರದ ಕೊಡುಗೆಗಳು ಸದಾ ಸ್ಮರಣೀಯವಾಗಿವೆ ಎಂದು ಹೇಳಿದರು.
ಸಿಂಧನೂರು ರಸ್ತೆಯಲ್ಲಿರುವ ಅಡವಿ ಅಮರೇಶ್ವರ ವೃತ್ತದಿಂದ ಶ್ರೀ ಸುವರ್ಣಗಿರಿ ವಿರಕ್ತಮಠದವರೆಗೆ ರಥಯಾತ್ರೆ ಮೆರವಣಿಗೆ ನಡೆಯಿತು. ನೂರಾರು ಸುಮಂಗಲಿಯರು ಕಳಸ ಹೊತ್ತು ರಥಯಾತ್ರೆಯನ್ನು ಸ್ವಾಗತಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಒಳಬಳ್ಳಾರಿಯ ಶ್ರೀ ಸುವರ್ಣಗಿರಿ ವಿರಕ್ತಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಶ್ರೀ ಸುವರ್ಣಗಿರಿ ವಿರಕ್ತಮಠ ಯದ್ದಲದೊಡ್ಡಿಮಠದ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಸಿರುಗುಪ್ಪದ ಗುರುಬಸವ ಮಹಾಮಠದ ಬಸವಭೂಷಣ ಮಹಾಸ್ವಾಮಿಗಳು, ಅರಳಹಳ್ಳಿ ಮಠದ ಶರಣಬಸವದೇವರು ಸೇರಿದಂತೆ ವಿವಿಧ ಮಠಗಳ 30ಕ್ಕೂ ಹೆಚ್ಚು ಶ್ರೀಗಳು ಭಾಗವಹಿಸಿದ್ದರು.



