ಕವಿತಾಳ: ಲಿಂಗಸುಗೂರು ತಾಲೂಕಿನ ಚಿಕ್ಕಹಸರೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಜಮೀನು ನೀಡಿದ ರೈತರು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಮಂಗಳವಾರದಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಎನ್ಎಚ್-748ಎ ರಾಷ್ಟ್ರೀಯ ಹೆದ್ದಾರಿ ಹಾಗೂ ಭಾರತಮಾಲಾ ಯೋಜನೆಗಾಗಿ ಚಿಕ್ಕಹಸರೂರು ಗ್ರಾಮದ ಸರ್ವೆ ನಂ.41 ಹಾಗೂ ಅದಕ್ಕೆ ಸಂಬಂಧಿಸಿದ ಹಿಸ್ಸಾ ನಂಬರ್ಗಳು ಸೇರಿದಂತೆ ವಿವಿಧ ಸರ್ವೆ ನಂಬರ್ಗಳ ಜಮೀನುಗಳನ್ನು ರಸ್ತೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡು ಸುಮಾರು ಎರಡು ವರ್ಷಗಳಾದರೂ, ಅರ್ಹ ಭೂಮಾಲೀಕರಿಗೆ ಕಾನೂನುಬದ್ಧ ಪರಿಹಾರ ನೀಡಿಲ್ಲ ಎಂದು ಧರಣಿನಿರತ ರೈತರು ಆರೋಪಿಸಿದ್ದಾರೆ.
ಸ್ವಾಧೀನಪಡಿಸಿಕೊಂಡಿರುವ ಕೆಲವು ಭೂಮಿಗಳನ್ನು ಸರ್ಕಾರವು ಮಾದಿಗ ಹಾಗೂ ಇತರೆ ದಲಿತ ಸಮುದಾಯದ ಕುಟುಂಬಗಳಿಗೆ ಈ ಹಿಂದೆ ಮಂಜೂರು ಮಾಡಿತ್ತು. ಬಡ ಹಾಗೂ ದಲಿತ ಕುಟುಂಬಗಳ ಜೀವನೋಪಾಯಕ್ಕಾಗಿ ನೀಡಿದ್ದ ಭೂಮಿಯನ್ನೇ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ನಂತರವೂ ಪರಿಹಾರ ನೀಡದಿರುವುದರಿಂದ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ರಾಯಚೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಸ್ಎಲ್ಎಒ ಗುರುಸಿದ್ಧಯ್ಯ ಸ್ವಾಮಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ದಾಖಲೆಗಳ ನೆಪವೊಡ್ಡಿ ಪರಿಹಾರ ನೀಡದೆ ಕಾಲಹರಣ ಮಾಡುತ್ತಿದ್ದಾರೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರೂ ಇದುವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ರೈತರು ಆರೋಪಿಸಿದರು.
ರೈತ ಹೋರಾಟಗಾರ ಅರಳಯ್ಯ ಚಿಕ್ಕಹೆಸರೂರು ಮಾತನಾಡಿ, ದಲಿತ ಹಾಗೂ ಬಡ ರೈತ ಕುಟುಂಬಗಳು ಒಂದೆಡೆ ವಿವಿಧ ಸಂಕಷ್ಟಗಳನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಭರವಸೆಗಳು ಈ ಕುಟುಂಬಗಳನ್ನು ಮತ್ತಷ್ಟು ಆರ್ಥಿಕ ತೊಂದರೆಗೆ ತಳ್ಳುತ್ತಿವೆ ಎಂದು ಆರೋಪಿಸಿದರು. ಅರ್ಹ ಭೂಮಾಲೀಕರಿಗೆ ಪರಿಹಾರ ದೊರೆಯುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಡಿಎಸ್ಎಸ್ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪುರ ಮಾತನಾಡಿ, ಇಲಾಖೆಯ ನಿರ್ಲಕ್ಷ್ಯದಿಂದ ಬಡ ರೈತರು ಹಾಗೂ ದಲಿತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಆರೋಪಿಸಿದರು. ಪರಿಹಾರದ ಹಣ ಬಿಡುಗಡೆಯಾಗಿ ಅರ್ಹ ಭೂಮಾಲೀಕರಿಗೆ ನ್ಯಾಯ ಸಿಗುವವರೆಗೆ ವಿವಾದಿತ ಜಮೀನಿನಲ್ಲಿ ಹೆದ್ದಾರಿ ಕಾಮಗಾರಿಯನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಗೆ ಸ್ಪಷ್ಟ ಪರಿಹಾರ ನೀಡಬೇಕು. ಶಾಶ್ವತ ಪರಿಹಾರ ದೊರೆಯುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಭೂಮಾಲೀಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಪ್ರದೀಪ್, ಕಿರಣ್ ಕುಮಾರ್, ಸಿದ್ದಪ್ಪ ಹೂವಿನಬಾವಿ, ಶರಣಬಸವ ಬುಳ್ಳಾಪುರು, ಹುಚ್ಚಪ್ಪ ಬುಳ್ಳಾಪುರು, ಲಕ್ಷ್ಮಣ, ರವಿಕುಮಾರ್ ಕಡತಲ್, ಮೌನೇಶ, ವಿಜಯಕುಮಾರ್, ರಾಜು ಕಟ್ಟಿಮನಿ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಹಾಗೂ ನೊಂದ ರೈತರು ಭಾಗವಹಿಸಿದ್ದರು.



