ಕೊಪ್ಪಳ: ನಾಡಿನ ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳನ್ನು ಆಹ್ವಾನಿಸಿರುವುದು ಅತ್ಯಂತ ಸಂತಸದ ಸಂಗತಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಗವಿಸಿದ್ಧೇಶ್ವರ ಶ್ರೀಗಳಿಗೆ ಈ ಗೌರವ ದೊರೆಯುವಲ್ಲಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ, ಸಚಿವ ಶಿವರಾಜ ಎಸ್. ತಂಗಡಗಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ಪಾತ್ರ ಅಭಿನಂದನಾರ್ಹವಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಡಿ.ಕೆ. ಶಿವಕುಮಾರ್ ಅವರನ್ನು ಕೊಪ್ಪಳದ ಗವಿಮಠ ಜಾತ್ರೆಗೆ ಆಹ್ವಾನಿಸಿ, ಜಾತ್ರೆಯ ವೈಭವ, ತ್ರಿವಿಧ ದಾಸೋಹ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಗಳನ್ನು ಪರಿಚಯಿಸಲಾಗಿತ್ತು. ಗವಿಮಠದ ಸಮಾಜಮುಖಿ ಕಾರ್ಯಗಳನ್ನು ಅವರು ಹತ್ತಿರದಿಂದ ಕಂಡಿದ್ದು, ಇದೀಗ ಅಂತಾರಾಷ್ಟ್ರೀಯ ಖ್ಯಾತಿಯ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಶ್ರೀಗಳನ್ನು ಆಹ್ವಾನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಗವಿಸಿದ್ಧೇಶ್ವರ ಶ್ರೀಗಳ ಪ್ರಗತಿಪರ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸಂದ ಗೌರವ ಇದಾಗಿದೆ. ಈ ಅವಕಾಶವನ್ನು ಶ್ರೀಗಳು ಮತ್ತಷ್ಟು ಜನಪರ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಜ್ಯೋತಿ ಗೊಂಡಬಾಳ ಹೇಳಿದ್ದಾರೆ. ಮೈಸೂರು ಅರಮನೆಯಲ್ಲಿರುವ ರತ್ನಖಚಿತ ಅಂಬಾರಿಗೂ ಕೊಪ್ಪಳ ಭಾಗದ ಐತಿಹಾಸಿಕ ಹಿನ್ನೆಲೆ ಇದೆ ಎಂದು ಉಲ್ಲೇಖಿಸಿರುವ ಅವರು, ಅದು ಕಂಪಿಲರಾಯನ ಪುತ್ರ ಗಂಡುಗಲಿ ಕುಮಾರರಾಮನ ಕಾಲಕ್ಕೆ ಸಂಬಂಧಿಸಿದ್ದು, ಕಾಲಕ್ರಮೇಣ ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ಸೇರಿದೆ ಎಂದು ಹೇಳಿದ್ದಾರೆ. ಅಂತಹ ಐತಿಹಾಸಿಕ ಪರಂಪರೆಯ ಮೈಸೂರು ದಸರಾಕ್ಕೆ ಗವಿಸಿದ್ಧೇಶ್ವರ ಶ್ರೀಗಳು ಚಾಲನೆ ನೀಡುತ್ತಿರುವುದು ಕೊಪ್ಪಳ ಜಿಲ್ಲೆಗೆ ಕೀರ್ತಿಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಬಲ್ಡೋಟಾ ವಿಷಯ ಸೇರಿದಂತೆ ಜಿಲ್ಲೆಯ ಜನರ ಸಮಸ್ಯೆಗಳು ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸುವ ಅವಕಾಶವೂ ದೊರೆಯಲಿದೆ. ಶ್ರೀಗಳು ನಾಡಿನ ಹಿತದೃಷ್ಟಿಯಿಂದ ತಮ್ಮ ಧ್ವನಿಯನ್ನು ಎತ್ತಲಿದ್ದಾರೆ ಎಂಬ ವಿಶ್ವಾಸವಿದೆ. ಇದು ಇಡೀ ಉತ್ತರ ಕರ್ನಾಟಕ ಹಾಗೂ ಸಿದ್ಧ ಪರಂಪರೆಗೆ ಸಂದ ದೊಡ್ಡ ಗೌರವವಾಗಿದೆ ಎಂದು ಜ್ಯೋತಿ ಎಂ. ಗೊಂಡಬಾಳ ತಿಳಿಸಿದ್ದಾರೆ.