ಕುಕನೂರು: ಪಟ್ಟಣದ ಪೊಲೀಸ್ ಠಾಣೆಯ ನೂತನ ಪೊಲೀಸ್ ಉಪನಿರೀಕ್ಷಕರಾಗಿ ಮೌನೇಶ ರಾಠೋಡ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕುಕನೂರು ಪಟ್ಟಣ ಹಾಗೂ ಠಾಣಾ ವ್ಯಾಪ್ತಿಯ ಪ್ರದೇಶಗಳು ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಗೆ ಹೆಸರಾಗಿದ್ದು, ಈ ವಾತಾವರಣ ಮುಂದುವರಿಯುವಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಉತ್ತಮ ಪೊಲೀಸ್ ಸೇವೆ ನೀಡುವುದು ತಮ್ಮ ಆದ್ಯತೆಯಾಗಿದ್ದು, ಕಾನೂನು ಉಲ್ಲಂಘನೆ ಹಾಗೂ ಸಮಾಜದ ಶಾಂತಿಗೆ ಧಕ್ಕೆ ತರುವ ಚಟುವಟಿಕೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೊಲೀಸರನ್ನು ಕಂಡಾಗ ಸಾರ್ವಜನಿಕರಲ್ಲಿ ಭಯದ ಬದಲು ವಿಶ್ವಾಸ ಮೂಡಬೇಕು. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಸ್ನೇಹಪೂರ್ಣ ಸಂಬಂಧ ಬೆಳೆದು, ಜನರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಸಮಸ್ಯೆಗಳನ್ನು ಠಾಣೆಯ ಗಮನಕ್ಕೆ ತರಬೇಕು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಕೇವಲ ಪೊಲೀಸರ ಜವಾಬ್ದಾರಿಯಲ್ಲ, ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಹೇಳಿದರು.
ನೂತನ ಪಿಎಸ್ಐ ಮೌನೇಶ ರಾಠೋಡ್ ಅವರನ್ನು ಅಭಿನಂದಿಸಲು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಅವರು ಠಾಣೆಗೆ ಭೇಟಿ ನೀಡಿದರು. ಪಿಎಸ್ಐ ಅವರನ್ನು ಸನ್ಮಾನಿಸಲು ಮುಂದಾದ ವೇಳೆ, “ನೀವು ನಮಗಿಂತ ಹಿರಿಯರು, ನಿಮಗೆ ನಾವೇ ಗೌರವ ಸಲ್ಲಿಸಬೇಕು” ಎಂದು ಹೇಳಿದ ಮೌನೇಶ ರಾಠೋಡ್ ಅವರು ಅಂದಪ್ಪ ಕೋಳೂರ ಅವರನ್ನು ತಮ್ಮ ಕಚೇರಿಯಲ್ಲೇ ಸನ್ಮಾನಿಸಿ ಗೌರವಿಸಿದರು.
ಅಧಿಕಾರಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯರ ಬಗ್ಗೆ ಗೌರವ ಹಾಗೂ ವಿನಯ ತೋರಿದ ಪಿಎಸ್ಐ ಅವರ ನಡೆ ಶ್ಲಾಘನೀಯ ಎಂದು ರೈತ ಮುಖಂಡರು ಅಭಿಪ್ರಾಯಪಟ್ಟರು.
ಈ ವೇಳೆ ಮಾತನಾಡಿದ ಪಿಎಸ್ಐ ಮೌನೇಶ ರಾಠೋಡ್, ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಪೊಲೀಸ್ ಠಾಣೆಯ ಗಮನಕ್ಕೆ ತರಬೇಕು. ಕಾನೂನುಬದ್ಧವಾಗಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಗ್ರಾಮೀಣ ಭಾಗಗಳಲ್ಲಿ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಅವುಗಳಿಗೆ ಕಡಿವಾಣ ಹಾಕಲಾಗುವುದು. ತಾಲೂಕಿನ ಹಿರಿಯರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ದೇವರಡ್ಡಿ ನಾಗರಡ್ಡಿ, ಶರಣಪ್ಪ ಹನಸಿ, ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



