ವಡವಾಟಿ, ಸೆ.26: ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆಯನ್ನು ಡಿಜೆ ಅಬ್ಬರವಿಲ್ಲದೆ, ಕೇವಲ ಸಾಂಪ್ರದಾಯಿಕ ಕಲಾವಿದರನ್ನು ಕರೆಸಿ ಅವರ ಕಲಾ ಪ್ರದರ್ಶನದೊಂದಿಗೆ ಭಕ್ತಿಭಾವದಿಂದ ನೆರವೇರಿಸಲಾಯಿತು.
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಸದೆ, ವೀರಗಾನ ಕಲಾವಿದರನ್ನು ಆಹ್ವಾನಿಸಲಾಗಿತ್ತು. ಕಲಾವಿದರು ಪೌರಾಣಿಕ ಹಾಗೂ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ವಿವಿಧ ಕಲಾ ಪ್ರದರ್ಶನಗಳನ್ನು ನೀಡುತ್ತಾ ಮೆರವಣಿಗೆಯಲ್ಲಿ ಸಾಗಿದರು. ಅವರ ಪ್ರದರ್ಶನಗಳು ಗ್ರಾಮಸ್ಥರು ಹಾಗೂ ಭಕ್ತರ ಗಮನ ಸೆಳೆದವು. ಸಾಂಪ್ರದಾಯಿಕ ವಾದ್ಯಗಳ ನಾದದೊಂದಿಗೆ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜನೆ ಮಾಡಲಾಯಿತು.
ಆಧುನಿಕ ಡಿಜೆ ಸದ್ದಿಗೆ ಬದಲಾಗಿ ನಾಡಿನ ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೆ ಆದ್ಯತೆ ನೀಡಿದ ಗ್ರಾಮದ ಯುವಕರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಾರಗೇರಾ ಸಿಪಿಐ ಸಬಯ್ಯ ಅವರು ಗ್ರಾಮದ ಯುವಕರ ಕಾರ್ಯವನ್ನು ಶ್ಲಾಘಿಸಿ, ಡಿಜೆ ಅಬ್ಬರಕ್ಕೆ ಮೊರೆ ಹೋಗದೆ ಕಲಾವಿದರಿಗೆ ಅವಕಾಶ ನೀಡಿ, ಶಾಂತಿಯುತ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ಗಣೇಶ ವಿಸರ್ಜನೆ ಮಾಡಿರುವುದು ಉತ್ತಮ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ನರಸಿಂಹಲು ಚಂದೆ ಕಾಡಪ್ಪ ಅವರ ಅನುಪಸ್ಥಿತಿಯಲ್ಲಿ ಗ್ರಾಮದ ಯುವಕರು ಹಾಗೂ ಹಿರಿಯರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಣೇಶನಿಗೆ ಭಕ್ತಿಭಾವದಿಂದ ವಿದಾಯ ಕೋರಿದರು.



