ರಾಯಚೂರು: ದೇಶದ ವಿವಿಧ ಪ್ರದೇಶಗಳ ಜನರ ನಡುವೆ ಸಂಪರ್ಕ ಕಲ್ಪಿಸುವ ಭಾಷೆಗಳಲ್ಲಿ ಹಿಂದಿ ಪ್ರಮುಖವಾಗಿದ್ದು, ವಿದ್ಯಾರ್ಥಿಗಳು ಅದರ ಜ್ಞಾನವನ್ನು ವಿಸ್ತರಿಸಿಕೊಳ್ಳುವುದರ ಜೊತೆಗೆ ಪ್ರಾಯೋಗಿಕ ಬಳಕೆಯಲ್ಲಿಯೂ ಪರಿಣತಿ ಸಾಧಿಸಬೇಕು ಎಂದು ಪಿ.ಎಂ. ನವೋದಯ ಶಾಲೆಯ ಹಿಂದಿ ವಿಭಾಗದ ತರಬೇತಿ ಪಡೆದ ಪದವೀಧರ ಶಿಕ್ಷಕ ಕೆ.ಪಿ. ಸಿಂಗ್ ಹೇಳಿದರು.
ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ಎಲ್.ವಿ.ಡಿ. ಮಹಾವಿದ್ಯಾಲಯದ ಹಿಂದಿ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿಂದಿ ದಿನಾಚರಣೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಹಲವು ರಾಜ್ಯಗಳಲ್ಲಿ ವಿಭಿನ್ನ ಭಾಷೆಗಳನ್ನು ಮಾತನಾಡುವ ಜನರ ನಡುವೆ ವಿಚಾರ ವಿನಿಮಯಕ್ಕೆ ಹಿಂದಿ ಸಂಪರ್ಕದ ಕೊಂಡಿಯಾಗಿ ಬಳಕೆಯಾಗುತ್ತಿದೆ. ವಿದ್ಯಾರ್ಥಿಗಳು ಹಿಂದಿಯನ್ನು ಕೇವಲ ಪಠ್ಯಕ್ರಮದ ಒಂದು ವಿಷಯಕ್ಕೆ ಸೀಮಿತಗೊಳಿಸದೆ, ನಿತ್ಯದ ವ್ಯವಹಾರ ಮತ್ತು ಸಂವಹನದಲ್ಲಿಯೂ ಅಳವಡಿಸಿಕೊಂಡರೆ ಭಾಷೆಯ ಮೇಲಿನ ಹಿಡಿತ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಎಲ್.ವಿ.ಡಿ. ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ವೀರ ಹನುಮಾನ್ ಮಾತನಾಡಿ, 1949ರ ಸೆಪ್ಟೆಂಬರ್ 14ರಂದು ಸಂವಿಧಾನ ಸಭೆಯು ದೇವನಾಗರಿ ಲಿಪಿಯ ಹಿಂದಿಯನ್ನು ಕೇಂದ್ರದ ಅಧಿಕೃತ ಭಾಷೆಯಾಗಿ ಅಂಗೀಕರಿಸಿದ ಸ್ಮರಣಾರ್ಥ ಹಿಂದಿ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಹಿಂದಿ ಭಾಷೆಯು ಭಾರತದ ಸಂಸ್ಕೃತಿ, ನಾಗರಿಕತೆ ಹಾಗೂ ಜೀವನ ಮೌಲ್ಯಗಳ ಅಭಿವ್ಯಕ್ತಿಗೆ ತನ್ನದೇ ಆದ ಕೊಡುಗೆ ನೀಡಿದೆ. ಭಾಷೆಯ ಅಧ್ಯಯನದಿಂದ ವಿದ್ಯಾರ್ಥಿಗಳ ಜ್ಞಾನ ವಿಸ್ತರಣೆಯಾಗುವುದರೊಂದಿಗೆ ವಿಚಾರಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಸಾಮರ್ಥ್ಯವೂ ಬೆಳೆಯುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ಸ್ವರಚಿತ ಹಿಂದಿ ಕವಿತೆಯನ್ನು ವಾಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಶರಣಗೌಡ ಬಿ.ಎಚ್. ಮಾತನಾಡಿ, ವಿದ್ಯಾರ್ಥಿಗಳು ಭಾಷೆಗಳ ಕಲಿಕೆಯ ಜೊತೆಗೆ ಉತ್ತಮ ಸಂವಹನ ಸಾಮರ್ಥ್ಯವನ್ನೂ ರೂಢಿಸಿಕೊಳ್ಳಬೇಕು. ಪ್ರತಿಯೊಂದು ಭಾಷೆಗೂ ತನ್ನದೇ ಆದ ವೈಶಿಷ್ಟ್ಯ ಮತ್ತು ಮಹತ್ವವಿದ್ದು, ಎಲ್ಲ ಭಾಷೆಗಳನ್ನು ಗೌರವ ಹಾಗೂ ಆಸಕ್ತಿಯಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಅರುಣಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿಯನ್ನು ಪಠ್ಯಪುಸ್ತಕದ ಅಧ್ಯಯನಕ್ಕೆ ಮಾತ್ರ ಸೀಮಿತಗೊಳಿಸದೆ ಇತರ ವಿಷಯಗಳ ಕಲಿಕೆ ಹಾಗೂ ದೈನಂದಿನ ವ್ಯವಹಾರಗಳಲ್ಲಿಯೂ ಬಳಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯ ಮತ್ತು ಅಭಿವ್ಯಕ್ತಿ ಕೌಶಲ್ಯ ಉತ್ತಮಗೊಳ್ಳುತ್ತದೆ ಎಂದರು.
ವಿದ್ಯಾರ್ಥಿನಿಯರಾದ ನವನೀತಾ ಹಾಗೂ ನಫೀಜಾ ಹಿಂದಿ ಭಾಷೆಯ ಮಹತ್ವದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಹಿಂದಿ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಪ್ರಮಾಣಪತ್ರಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಗ್ಲೋಬಲ್ ಐಕಾನ್ಸ್ ಆಫ್ ಇಂಡಿಯಾ ಇ-ಮ್ಯಾಗಜೀನ್ ಸಂಸ್ಥೆಯು ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ನೀಡಿದ ‘ರಾಷ್ಟ್ರೀಯ ಶಿಕ್ಷಣ ರತ್ನ ಸಮ್ಮಾನ್–2026’ ಗೌರವಕ್ಕೆ ಪಾತ್ರರಾದ ಡಾ. ಅರುಣಾ ಹಿರೇಮಠ ಅವರನ್ನು ಹಿಂದಿ ವಿಭಾಗದ ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ಅಭಿನಂದಿಸಿ ಸನ್ಮಾನಿಸಿದರು.
ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಡಾ. ಆಂಜನೇಯ ಹಾಗೂ ಡಾ. ಚಕ್ರಧರ ಬಿ., ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ಹಿಂದಿ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಹರ್ಷಿತಾ ಪ್ರಾರ್ಥಿಸಿದರು. ದೀಕ್ಷಿತಾ ಹಾಗೂ ಅಫಿಫಾ ಸ್ವಾಗತಿಸಿದರು. ಮದಿಹಾ ಫಾತಿಮಾ ಮತ್ತು ಅಸ್ಫಾ ತಜೀನ್ ಕಾರ್ಯಕ್ರಮ ನಿರೂಪಿಸಿದರು. ಅಸಾದ್ ವಂದಿಸಿದರು.



