ಸಿರವಾರ: ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ವಡವಾಟಿ 9ಎ ವಿಭಾಗದ ಕಲಂಗೇರಾ, ಪಾತಾಪುರ, ಹಣಗಿ, ಹುಸೇನಪುರ ಹಾಗೂ ಕವಿತಾಳ ಸೀಮಾಂತರ ಪ್ರದೇಶಗಳಲ್ಲಿ ಬಾಕಿ ಉಳಿದಿರುವ ಉಪಕಾಲುವೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಕಾಲುವೆಯ ಕೊನೆಯ ಭಾಗದವರೆಗೂ ನೀರು ತಲುಪಿಸುವಂತೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚಿಸಿದರು.

ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ್ ಅವರೊಂದಿಗೆ ಶನಿವಾರ ಕಾಮಗಾರಿ ಸ್ಥಳಗಳಿಗೆ ಜಂಟಿಯಾಗಿ ಭೇಟಿ ನೀಡಿ ಕಾಲುವೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದ ಅವರು, ಈಗಾಗಲೇ 9ಎ ಕಾಲುವೆಗೆ ನೀರು ಹರಿಸಲಾಗಿದ್ದರೂ ಉಪಕಾಲುವೆಗಳ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಹಾಗೂ ಕೊನೆಯ ಭಾಗದವರೆಗೆ ನೀರು ತಲುಪದ ಕಾರಣ ಹಲವು ಪ್ರದೇಶಗಳ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ವೇಳೆ ರೈತರು ಕಾಲುವೆಗಳಲ್ಲಿ ಸಮರ್ಪಕವಾಗಿ ನೀರು ಹರಿಯದಿರುವುದು, ಉಪಕಾಲುವೆ ಕಾಮಗಾರಿ ಬಾಕಿ ಉಳಿದಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ್ ಅವರ ಗಮನಕ್ಕೆ ತಂದರು. ಕಾಮಗಾರಿ ವಿಳಂಬಕ್ಕೆ ಕಾರಣವೇನು ಮತ್ತು ಇನ್ನೆಷ್ಟು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಬೋಸರಾಜು ಅಧಿಕಾರಿಗಳನ್ನು ಪ್ರಶ್ನಿಸಿದರು.

“ಕಾಲುವೆ ಕಾಮಗಾರಿ ನೆನೆಗುದಿಗೆ ಬೀಳುವುದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಬಾಕಿ ಕಾಮಗಾರಿಗಳನ್ನು ವಿಳಂಬ ಮಾಡದೆ ಪೂರ್ಣಗೊಳಿಸಿ, ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ವಡವಾಟಿ ವಿಭಾಗದ ಕಾಲುವೆ ವ್ಯಾಪ್ತಿಯ ಕೊನೆಯ ಭಾಗದವರೆಗೂ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮುಂದಿನ ವಾರ ಮತ್ತೆ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಲಾಗುವುದು. ಅಷ್ಟರೊಳಗೆ ಗುತ್ತಿಗೆದಾರರು ಬಾಕಿ ಕಾಮಗಾರಿಗಳನ್ನು ಆರಂಭಿಸಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಬೋಸರಾಜು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್, ಅಧೀಕ್ಷಕ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

ಕಾಂಗ್ರೆಸ್ ಮುಖಂಡರಾದ ಕಿರಲಿಂಗಪ್ಪ, ತಿಪ್ಪಯ್ಯಸ್ವಾಮಿ, ಶೇಖರಪ್ಪ ಹಟ್ಟಿ, ಚಾಂದ್ ಪಾಷಾ, ಹನುಮಂತ, ವೆಂಕಟೇಶ ನಾಯಕ್, ಹಾಜಿ ಖಾತ್ರಿ, ಸೂಗರೆಡ್ಡಿ, ಪಂಪನಗೌಡ, ನವೀನ್ ಕುಮಾರ್, ಸಂಗನಗೌಡ ಸೇರಿದಂತೆ ಕಲಂಗೇರಾ, ಪಾತಾಪುರ, ಹಣಗಿ, ಹುಸೇನಪುರ ಹಾಗೂ ಕವಿತಾಳ ಸೀಮಾಂತರದ ವಿವಿಧ ಗ್ರಾಮಗಳ ರೈತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.