ರಾಯಚೂರು, ಸೆ.28: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ 119ನೇ ಜನ್ಮದಿನವನ್ನು ನಗರದ ಸ್ಟೇಷನ್ ರಸ್ತೆಯ ಸಾರ್ವಜನಿಕ ಉದ್ಯಾನವನದಲ್ಲಿ ರಾಯಚೂರು ವಾಕಿಂಗ್ ಕ್ಲಬ್ ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ವತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಐಡಿವೈಓ ಜಿಲ್ಲಾ ಅಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಿವಿಧ ಹೋರಾಟದ ಧಾರೆಗಳು ಕಾರ್ಯನಿರ್ವಹಿಸಿದ್ದವು. ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂತಹ ಕ್ರಾಂತಿಕಾರಿಗಳು ಅಗತ್ಯವಿದ್ದರೆ ಸಶಸ್ತ್ರ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆಯಬೇಕು ಎಂಬ ನಿಲುವು ಹೊಂದಿದ್ದರು ಎಂದು ಹೇಳಿದರು.

ಭಗತ್ ಸಿಂಗ್ ಹಾಗೂ ಅವರ ಸಂಗಡಿಗರ ಹೋರಾಟ ಕೇವಲ ಬ್ರಿಟಿಷರ ಆಡಳಿತದಿಂದ ದೇಶವನ್ನು ಮುಕ್ತಗೊಳಿಸುವುದಕ್ಕೆ ಸೀಮಿತವಾಗಿರಲಿಲ್ಲ. ಜಾತಿ ಪದ್ಧತಿ, ಅಸಮಾನತೆ ಮತ್ತು ಶೋಷಣೆಯಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕಿ ಸಮಾನತೆಯ ಸಮಾಜ ನಿರ್ಮಿಸಬೇಕು ಎಂಬ ಆಶಯ ಅವರದ್ದಾಗಿತ್ತು. ಹಿಂದೂಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ನಲ್ಲಿ ಸಕ್ರಿಯರಾಗಿದ್ದ ಅವರು, ಮಾನವನಿಂದ ಮಾನವನ ಶೋಷಣೆ ಇಲ್ಲದ ಸಮಾಜದ ನಿರ್ಮಾಣದ ಕನಸು ಕಂಡಿದ್ದರು ಎಂದರು.

ಭಗತ್ ಸಿಂಗ್ ಅಪಾರ ಓದಿನ ಆಸಕ್ತಿ ಹೊಂದಿದ್ದ ಯುವ ಕ್ರಾಂತಿಕಾರಿಯಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ವಿಷಯಗಳ ಕುರಿತು ಅಧ್ಯಯನ ನಡೆಸಿ ಗಳಿಸಿದ ಜ್ಞಾನವನ್ನು ದೇಶದ ವಿಮೋಚನಾ ಹೋರಾಟಕ್ಕೆ ಬಳಸಿಕೊಂಡಿದ್ದರು. ಅವರ ಆದರ್ಶ, ಮೌಲ್ಯ ಮತ್ತು ಹೋರಾಟದ ಮನೋಭಾವ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು ಎಂದು ಚನ್ನಬಸವ ಜಾನೇಕಲ್ ತಿಳಿಸಿದರು.

ರಾಯಚೂರು ವಾಕಿಂಗ್ ಕ್ಲಬ್‌ನ ಸಿದ್ದೇಶ್ ಗು. ವಿರಕ್ತಮಠ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್ ಸಿಂಗ್ ತಮ್ಮ ಜೀವನವನ್ನೇ ಬಲಿದಾನ ಮಾಡಿದರು. ಬ್ರಿಟಿಷರ ವಿರುದ್ಧ ರಾಜಿ ಮಾಡಿಕೊಳ್ಳದೆ ಹೋರಾಟ ನಡೆಸಿದ ಅವರು, ರಾಜಗುರು ಮತ್ತು ಸುಖದೇವ್ ಅವರೊಂದಿಗೆ ಹುತಾತ್ಮರಾದರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ತ್ಯಾಗ ಮತ್ತು ಬಲಿದಾನ ಸದಾ ಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ರಾಯಚೂರು ವಾಕಿಂಗ್ ಕ್ಲಬ್‌ನ ವಿ. ಲಕ್ಷ್ಮಿ ರೆಡ್ಡಿ, ಸಿದ್ದೇಶ್ ವಿರಕ್ತಮಠ, ಮುತ್ತುರಾಜ್, ಶರಣಬಸವ, ನರಸಿಂಹಲು, ಜಲಾಲುದ್ದೀನ್, ಬಸವರಾಜ ರೆಡ್ಡಿ, ಜಾಕಿರ್ ಹುಸೇನ್, ರಾಜೇಶ್, ಚಂದ್ರು, ಮುನಿಸ್ವಾಮಿ, ಸುರೇಶ್ ರಹೀಮ್, ಬಸವರಾಜ್, ವೀರೇಶ ರೆಡ್ಡಿ, ಲಕ್ಷ್ಮಣ್, ಮುನಿರೆಡ್ಡಿ, ಅಜರ ಹುಸೇನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.