ಮಾನ್ವಿ: ನಗರದ ಚೀಕಲಪರ್ವಿ ರಸ್ತೆಯಲ್ಲಿರುವ ಮಾನ್ವಿ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶಹೀದ ಭಗತ್ ಸಿಂಗ್ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ನರಸಿಂಹಮೂರ್ತಿ ದೇಸಾಯಿ ಅವರು ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಭಗತ್ ಸಿಂಗ್ ಅವರ ಕೆಚ್ಚೆದೆಯ ಹೋರಾಟವು ಸ್ವಾತಂತ್ರ್ಯ ಚಳವಳಿಗೆ ಹೊಸ ಚೈತನ್ಯ ನೀಡಿತು. ಬ್ರಿಟಿಷರ ವಿರುದ್ಧ ಹೋರಾಡಿದ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅವರ ದೇಶಪ್ರೇಮ, ಧೈರ್ಯ ಮತ್ತು ತ್ಯಾಗ ಯುವಪೀಳಿಗೆಗೆ ಸದಾ ಪ್ರೇರಣೆಯಾಗಬೇಕು ಎಂದು ಹೇಳಿದರು. ಕನ್ನಡ ಶಿಕ್ಷಕ ಮೋಹನ್ ಸಿಂಗ್ ಮಾತನಾಡಿ, ವಿದ್ಯಾರ್ಥಿಗಳು ಭಗತ್ ಸಿಂಗ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು. ಅವರಲ್ಲಿದ್ದ ದೇಶಪ್ರೇಮ, ಧೈರ್ಯ, ತ್ಯಾಗ ಹಾಗೂ ಸೇವಾ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಮುಂದಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಸೈಯದ್ ಮುಸ್ತಬ ಖಾದ್ರಿ, ಮುಖ್ಯಗುರು ನಾಗರತ್ನ ದೇಸಾಯಿ, ದೈಹಿಕ ಶಿಕ್ಷಣ ಶಿಕ್ಷಕ ಅಂಬಣ್ಣ ನಾಯಕ್ ಸೇರಿದಂತೆ ಶಿಕ್ಷಕರು, ಶಿಕ್ಷಕಿಯರು ಹಾಗೂ ಪಾಲಕರು ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.



