ಮಾನ್ವಿ: ಪಟ್ಟಣದ ಶ್ರೀ ವೆಂಕಟೇಶ್ವರ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವತಿಯಿಂದ ‘ನಶಾಮುಕ್ತ ಭಾರತ ಅಭಿಯಾನ’ ಅಂಗವಾಗಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ. ಅಂಬಿಕಾ ಮಧುಸೂದನ್ ನಾಯಕ, ಮಾದಕ ವ್ಯಸನವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ಕುಟುಂಬ ಹಾಗೂ ಸಾಮಾಜಿಕ ಜೀವನದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಒತ್ತಡದ ಜೀವನ, ಖಿನ್ನತೆ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವರು ವ್ಯಸನಕ್ಕೆ ಒಳಗಾಗುತ್ತಾರೆ. ಅಂತಹವರನ್ನು ತಿರಸ್ಕರಿಸುವ ಬದಲು ಸೂಕ್ತ ಚಿಕಿತ್ಸೆ, ಆಪ್ತ ಸಮಾಲೋಚನೆ ಹಾಗೂ ಪುನರ್ವಸತಿ ಕಲ್ಪಿಸಿ ಅವರನ್ನು ಸಹಜ ಜೀವನಕ್ಕೆ ಮರಳುವಂತೆ ಮಾಡುವುದು ಕುಟುಂಬ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಆಂಜನೇಯ ನಸಲಾಪುರ ಮಾತನಾಡಿ, ಇಂದಿನ ಯುವಜನತೆ ದೇಶದ ಅಮೂಲ್ಯ ಸಂಪತ್ತಾಗಿದ್ದು, ಯುವಕರು ಮಾದಕ ವ್ಯಸನದ ಬಲೆಗೆ ಸಿಲುಕಿದರೆ ಅವರ ವೈಯಕ್ತಿಕ ಭವಿಷ್ಯದ ಜೊತೆಗೆ ದೇಶದ ಅಭಿವೃದ್ಧಿಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸುವ ಕುರಿತು ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ‘ನಶಾಮುಕ್ತ ಭಾರತ’ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಸಂಕಲ್ಪವಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಶರಣಬಸವ ಕರಡಿಗುಡ್ಡ, ಉಪನ್ಯಾಸಕರಾದ ಅಂಬಣ್ಣ ನಾಯಕ, ಆಫ್ರಿನಾ ಬೇಗಂ, ಸಂತೋಷ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



