ಸಿರವಾರ, ಸೆ.29: ಸಾರ್ವಜನಿಕ ಗಣೇಶೋತ್ಸವಗಳು ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತವಾಗದೆ, ಹಿಂದೂ ಸಮಾಜವನ್ನು ಸಂಘಟಿಸುವ ಹಾಗೂ ಪರಸ್ಪರ ಒಗ್ಗಟ್ಟು ಬೆಳೆಸುವ ವೇದಿಕೆಗಳಾಗಿವೆ. ಹಿಂದೂಗಳು ಸಂಘಟಿತರಾಗಿದ್ದರೆ ಅವರ ಏಕತೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದಲ್ಲಿ ವೀರಸಾವರ್ಕರ್ ಯುವ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 5ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗಣೇಶೋತ್ಸವದಂತಹ ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಸಹಕಾರಿಯಾಗುತ್ತವೆ. ಹಿಂದೂ ಸಮಾಜ ಒಗ್ಗಟ್ಟಿನಿಂದ ಇದ್ದಾಗ ಪುಣ್ಯಕ್ಷೇತ್ರಗಳು, ಮಹಿಳೆಯರು, ಮಠ-ಮಾನ್ಯಗಳು ಹಾಗೂ ಧಾರ್ಮಿಕ ಪರಂಪರೆಯ ರಕ್ಷಣೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯದ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಯತ್ನಾಳ, 2028ರಲ್ಲಿ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಸಂಭವಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. “ಯಾವುದೇ ರೂಪದಲ್ಲಾದರೂ 2028ರಲ್ಲಿ ಹಿಂದೂಪರ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದು ಅವರು ಹೇಳಿದರು.
ದೇಶದ ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸಿದ ಅವರು, ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾನ್ ನಾಯಕರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ದೇಶಕ್ಕೆ ದೊರೆತ ಸ್ವಾತಂತ್ರ್ಯದ ಹಿಂದೆ ಅನೇಕ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಇತಿಹಾಸವಿದೆ ಎಂದು ಹೇಳಿದರು.
ಹಿಂದೂ ಸಮಾಜವನ್ನು ಒಗ್ಗೂಡಿಸಲು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಹಿಂದೂ ಧರ್ಮವು ಸಹಿಷ್ಣುತೆಯ ಪರಂಪರೆಯನ್ನು ಹೊಂದಿದ್ದು, ವಿವಿಧ ಮತ, ಪಂಥ ಹಾಗೂ ನಂಬಿಕೆಗಳನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದೆ. ಈ ಪರಂಪರೆಯನ್ನು ಉಳಿಸಿಕೊಂಡು ಸಮಾಜ ಸಂಘಟಿತವಾಗಬೇಕು ಎಂದು ಕರೆ ನೀಡಿದರು.
ರಾಜ್ಯ ರಾಜಕಾರಣದ ಕುರಿತು ಪ್ರಸ್ತಾಪಿಸಿದ ಅವರು, ತಮಿಳುನಾಡಿನಲ್ಲಿ ಕಂಡುಬಂದಿರುವ ರಾಜಕೀಯ ಬದಲಾವಣೆಯ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮುಂದಿನ ದಿನಗಳಲ್ಲಿ ಬದಲಾವಣೆಯ ಪರ್ವ ಆರಂಭವಾಗಲಿದೆ ಎಂದು ಅಭಿಪ್ರಾಯಪಟ್ಟರು. ತಮ್ಮ ಪರವಾದ ಸರ್ಕಾರ ಅಧಿಕಾರಕ್ಕೆ ಬಂದರೆ ಗಣೇಶೋತ್ಸವವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಘೋಷಿಸುವುದಾಗಿ ಅವರು ಭರವಸೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ನವಲಕಲ್ ಬೃಹನ್ಮಠದ ಪೂಜ್ಯ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಸುಕ್ಷೇತ್ರ ಕಂಬಳಿಹಾಳ ಹಾಗೂ ಸಜ್ಜಲಗುಡ್ಡದ ಪರಮಪೂಜ್ಯ ಶ್ರೀ ದೊಡ್ಡಬಸವಾರ್ಯ ತಾತನವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ವೀರಸಾವರ್ಕರ್ ಯುವ ಸೇನೆಯ ಅಧ್ಯಕ್ಷ ನಾಗರಾಜ ನಾಯಕ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಪಟ್ಟಣದ ಗಣ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಗಣೇಶ ಮಂಡಳಿಗಳ ಪದಾಧಿಕಾರಿಗಳು ಮತ್ತು ಯುವಕರು ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಯತ್ನಾಳ ಅಭಿಮಾನಿಗಳು ಸೇರಿದಂತೆ ಸಾವಿರಾರು ಜನರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.



