ಕವಿತಾಳ, ಸೆ.30: ಪಟ್ಟಣದ ಕೆಂಚಮ್ಮ ಗುಡಿ ಆವರಣದಲ್ಲಿ ಬುಧವಾರ ಮಾದರ ಮಹಾಸಭಾ ಸಂಘಟನೆಯ ಸದಸ್ಯತ್ವ ಅಭಿಯಾನಕ್ಕೆ ಶಿವಪ್ಪ ಗೊಲ್ಲದಿನ್ನಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮುದಾಯದ ಪ್ರತಿ ಕುಟುಂಬದ ಸದಸ್ಯರು ಮಾದರ ಮಹಾಸಭಾದ ಸದಸ್ಯತ್ವ ಪಡೆದು ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು. ಸಂಘಟಿತ ಹೋರಾಟದ ಮೂಲಕ ಸಮುದಾಯದ ಹಕ್ಕುಗಳು ಹಾಗೂ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಕಳೆದ 40ರಿಂದ 50 ವರ್ಷಗಳಿಂದ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಒಳಮೀಸಲಾತಿಗಾಗಿ ಹೋರಾಟ ತೀವ್ರಗೊಂಡ ಸಂದರ್ಭದಲ್ಲಿ ಸಮುದಾಯದ ಪರ ಮತ್ತು ವಿರೋಧದ ನಿಲುವುಗಳು ಸ್ಪಷ್ಟವಾಗಿ ಗೋಚರಿಸಿವೆ ಎಂದು ಅವರು ಅಭಿಪ್ರಾಯಪಟ್ಟರು.
ಮಾದಿಗ ಸಮುದಾಯವನ್ನು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುನ್ನಡೆಸುವ ಉದ್ದೇಶದಿಂದ ಮಾದರ ಮಹಾಸಭಾ ಸಂಘಟನೆಯನ್ನು ಕಟ್ಟಲಾಗಿದೆ. ಸಮುದಾಯದ ಪ್ರತಿಯೊಬ್ಬರೂ ಸಂಘಟನೆಯೊಂದಿಗೆ ಕೈಜೋಡಿಸಿ, ದೊರೆಯಬೇಕಾದ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪಡೆಯುವ ಜೊತೆಗೆ ಮುಂದಿನ ಪೀಳಿಗೆಯ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಮುಂದಾಗಬೇಕು ಎಂದು ಶಿವಪ್ಪ ಗೊಲ್ಲದಿನ್ನಿ ಕರೆ ನೀಡಿದರು.
ಅಬ್ರಾಹಂ ಹೊನ್ನಾಟಗಿ, ಹನುಮಂತರಾಯ ಅತ್ತನೂರು, ಮಾಜಿ ಗ್ರಾಮ ಅಧ್ಯಕ್ಷ ಮಲ್ಲಪ್ಪ ಹಾಗೂ ಕಿರೀಲಿಂಗ ಕವಿತಾಳ ಅವರು ಸಮುದಾಯದ ಸಂಘಟನೆ, ಹಕ್ಕುಗಳು ಮತ್ತು ಅಭಿವೃದ್ಧಿಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮಾದರ ಮಹಾಸಭಾದ ತಾಲೂಕು ಪದಾಧಿಕಾರಿಗಳಾದ ಮಲ್ಲಪ್ಪ ದೊಡ್ಡಮನೆ, ಜಯಪ್ಪ ಕೆಂಪು, ಸಲಹಾ ಸಮಿತಿ ಸದಸ್ಯರಾದ ಒನಪ್ಪ ಕವಿತಾಳ, ದುರುಗಪ್ಪ ಕಲ್ಲಮಗೇರಾ, ಮೌನೇಶ್ ಕೊಡ್ಲಿ, ಅಲ್ಲಮಪ್ರಭು, ಯಾಕೋಬ, ಜಯರಾಜ ಕಲ್ಲಮಗೇರಾ, ಬಸಪ್ಪ, ಹನುಮಂತ ಬುಳ್ಳಾಪುರ, ರಾಮಣ್ಣ ಇರಬಾಗೇರ, ಈರಣ್ಣ ಕೆಳಗೇರಿ, ಅರಳಪ್ಪ ತುಪ್ಪದೂರು, ವಿಜಯ್ ಕಡತಲ್, ಲಳ್ಳೆಪ್ಪ, ಸಿದ್ದಪ್ಪ, ಹನುಮಂತ ಮೇಸ್ತ್ರಿ ಬುಳ್ಳಾಪುರ, ಹುಸೇನಪ್ಪ ಗೊಲ್ಲದಿನ್ನಿ, ವಿಶ್ವ ಹಿರೇಬಾದರದಿನ್ನಿ, ಬಸವರಾಜ ರೋಡಲಾಬಂಡಿ, ಶಾಂತಪ್ಪ ಕಡತಲ್, ಆಜಪ್ಪ ಸೇರಿದಂತೆ ಮಾದಿಗ ಸಮಾಜದ ಯುವಕರು, ಹಿರಿಯರು ಹಾಗೂ ಸಮುದಾಯದ ಸದಸ್ಯರು ಭಾಗವಹಿಸಿದ್ದರು.



