ಮಾನ್ವಿ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಹೋಟೆಲ್‌ಗಳು ಮತ್ತು ಬೀದಿ ಬದಿ ಆಹಾರ ಮಳಿಗೆಗಳನ್ನು ಪರಿಶೀಲಿಸಿ, ಕಳಪೆ ಗುಣಮಟ್ಟದ ಆಹಾರ ಪೂರೈಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ತಾಲೂಕು ಘಟಕದ ವತಿಯಿಂದ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಮೈಲಾರಿ ಮಾತನಾಡಿ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಕೆಲವು ಹೋಟೆಲ್‌ಗಳು ಮತ್ತು ತಳ್ಳುಗಾಡಿಗಳಲ್ಲಿ ತಿಂಡಿ-ತಿನಿಸು ಮಾರಾಟ ಮಾಡುವವರು ಆಹಾರ ಸುರಕ್ಷತಾ ಇಲಾಖೆ, ಪುರಸಭೆ ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಂದ ಅಗತ್ಯ ಪರವಾನಗಿ ಪಡೆಯದೆ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕೆಲವೆಡೆ ಅಡುಗೆಗೆ ಬಳಸುವ ಆಹಾರ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿಲ್ಲ. ತಾಜಾ ತರಕಾರಿ ಮತ್ತು ಗುಣಮಟ್ಟದ ಅಡುಗೆ ಎಣ್ಣೆ ಬಳಸದೆ, ನಿಷೇಧಿತ ಕೃತಕ ಬಣ್ಣ ಹಾಗೂ ರುಚಿಕಾರಕ ಪದಾರ್ಥಗಳನ್ನು ಬಳಸಲಾಗುತ್ತಿದೆ. ಇಂತಹ ಆಹಾರ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಲ್ಲದೆ, ಟೀ ನೀಡುವ ಕಪ್‌ಗಳು ಹಾಗೂ ಪಾರ್ಸೆಲ್ ಆಹಾರ ನೀಡುವ ಸಂದರ್ಭದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಆದ್ದರಿಂದ ಆಹಾರ ನಿರೀಕ್ಷಕರು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಪಟ್ಟಣ ಮತ್ತು ಗ್ರಾಮೀಣ ಭಾಗದ ಹೋಟೆಲ್ ಹಾಗೂ ಬೀದಿ ಬದಿ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ, ಸ್ವಚ್ಛತೆ ಮತ್ತು ಪರವಾನಗಿಗಳನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿರುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ಸಾಜೀದ್ ಖಾದ್ರಿ, ದೊಡ್ಡಪ್ಪ ಹೂಗಾರ, ಶಿವಾನಂದ ನಾಯಕ, ಸುದರ್ಶನ್ ಪೂಜಾರಿ, ಶಬ್ಬೀರ್, ರಾಜ್ ಮಹಮ್ಮದ್, ಮಹಮ್ಮದ್ ಅಜಿರುದ್ದೀನ್, ಭೀಮೇಶ ನಾಯಕ, ಪ್ರಭು, ವೀರೇಶ ನಾಯಕ, ಕೃಷ್ಣ ನಾಯಕ, ಮುಸ್ತಾಫ್, ಹನುಮಂತ ನಾಯಕ, ಸಿದ್ದಪ್ಪ ನಾಯಕ, ಚನ್ನಬಸವ, ರಮೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.