ರಾಯಚೂರು, ಅ.1: ನಗರದಲ್ಲಿ ಅನುಮತಿ ಇಲ್ಲದೆ ಹೋಟೆಲ್‌, ಡಾಬಾ, ಕ್ಯಾಂಟೀನ್‌, ಮೊಬೈಲ್ ಶಾಪ್ ಸೇರಿದಂತೆ ವಿವಿಧೆಡೆ ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಹಾಗೂ ಅಕ್ರಮವಾಗಿ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಿ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ರಾಯಚೂರು ಜಿಲ್ಲಾ ಘಟಕ ಒತ್ತಾಯಿಸಿದೆ.

ಈ ಕುರಿತು ಸಂಘಟನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ರಾಯಚೂರು ನಗರದ ವಿವಿಧ ಪ್ರದೇಶಗಳಲ್ಲಿ ಗೃಹಬಳಕೆಗೆ ನೀಡಲಾಗುವ ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೋಟೆಲ್‌, ಡಾಬಾ, ಕ್ಯಾಂಟೀನ್ ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಅಲ್ಲದೆ, ಕೆಲವೆಡೆ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಗಮನ ಸೆಳೆದರು.

ನಗರದ ಕೆಲವು ಹೋಟೆಲ್‌ಗಳಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುತ್ತಿರುವುದು ಕಂಡುಬರುತ್ತಿದ್ದು, ಇಂತಹ ಅಕ್ರಮ ಚಟುವಟಿಕೆಗಳಿಂದ ಸರ್ಕಾರದ ಸಬ್ಸಿಡಿ ಸೌಲಭ್ಯದ ದುರುಪಯೋಗವಾಗುವುದರ ಜೊತೆಗೆ ಸಾರ್ವಜನಿಕ ಸುರಕ್ಷತೆಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಹಾಗೂ ಅನಧಿಕೃತವಾಗಿ ಸಂಗ್ರಹಿಸಿ ಮಾರಾಟ ಮಾಡುವ ಸ್ಥಳಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಅಕ್ರಮ ಸಿಲಿಂಡರ್ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ನಿಯಮಿತ ತಪಾಸಣೆ ನಡೆಸಿ, ಗೃಹಬಳಕೆಯ ಸಿಲಿಂಡರ್‌ಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಕೊಂಡಪ್ಪ ರಘುನಾಥ್, ಸೂರಿ, ನವೀನ್, ಮಹೇಶ್ ಪಾಟೀಲ್ ಹಾಗೂ ನಾಗರಾಜ್ ಉಪಸ್ಥಿತರಿದ್ದು ಮನವಿ ಪತ್ರ ಸಲ್ಲಿಸಿದರು.