ರಾಯಚೂರು: ರಸ್ತೆ ಅಪಘಾತಗಳ ತಡೆ ಹಾಗೂ ಸುರಕ್ಷಿತ ವಾಹನ ಚಾಲನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನವೋದಯ ಎಫ್‌ಎಂ 88.4 ವತಿಯಿಂದ ಅ.3ರಂದು ವಿಶೇಷ ಮಾಹಿತಿ ಕಾರ್ಯಕ್ರಮ ಪ್ರಸಾರವಾಗಲಿದೆ.

ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ ಹಾಗೂ ವಾಹನ ಸವಾರರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಲಿದ್ದಾರೆ.

ಅ.3ರಂದು ಬೆಳಿಗ್ಗೆ 10.30ಕ್ಕೆ ಪ್ರಸಾರವಾಗಲಿರುವ ಕಾರ್ಯಕ್ರಮದಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು, ಹೆಲ್ಮೆಟ್ ಬಳಕೆಯ ಅಗತ್ಯತೆ, ನಿಗದಿತ ವೇಗದ ಮಿತಿ ಪಾಲನೆ, ಸಂಚಾರ ಸಂಕೇತಗಳ ಮಹತ್ವ ಹಾಗೂ ಜವಾಬ್ದಾರಿಯುತ ವಾಹನ ಚಾಲನೆಯ ಕುರಿತು ವಿವರಿಸಲಾಗುವುದು.

ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವಲ್ಲಿ ಪೊಲೀಸ್ ಇಲಾಖೆಯ ಕ್ರಮಗಳ ಜೊತೆಗೆ ಸಾರ್ವಜನಿಕರ ಸಹಕಾರ ಮತ್ತು ಜವಾಬ್ದಾರಿಯೂ ಪ್ರಮುಖವಾಗಿದ್ದು, ಪ್ರತಿಯೊಬ್ಬ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಹಾಗೂ ಇತರರ ಜೀವದ ಸುರಕ್ಷತೆಗೆ ಆದ್ಯತೆ ನೀಡಬೇಕೆಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ತಲುಪಿಸಲಾಗುವುದು.

ಬೆಳಿಗ್ಗೆ ಪ್ರಸಾರವಾಗುವ ವಿಶೇಷ ಕಾರ್ಯಕ್ರಮವನ್ನು ಅದೇ ದಿನ ಸಂಜೆ 7.30ಕ್ಕೆ ಮರುಪ್ರಸಾರ ಮಾಡಲಾಗುವುದು. ಸಾರ್ವಜನಿಕರು ಕಾರ್ಯಕ್ರಮವನ್ನು ಆಲಿಸಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಮಾಹಿತಿ ಪಡೆದು, ಅವುಗಳನ್ನು ದೈನಂದಿನ ಜೀವನದಲ್ಲಿ ಪಾಲಿಸುವಂತೆ ನವೋದಯ ಎಫ್‌ಎಂ ಕೇಂದ್ರದ ಮುಖ್ಯಸ್ಥ ಅಮರೇಶ ಆಶಿಯಾಳ ಮನವಿ ಮಾಡಿದ್ದಾರೆ.

ವಿಶೇಷ ಸಂದರ್ಶನದ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕ ಡಾ. ಅಮೃತ್ ರಡ್ಡಿ, ನಿರ್ದೇಶಕರಾದ ಡಾ. ರಾಮೋಹನ್ ಗುಪ್ತ, ವಿಜಯ್ ಕುಮಾರ್, ಸುರೇಶ ಬಾಬು ಹಾಗೂ ನವೋದಯ ಎಫ್‌ಎಂ ಸಿಬ್ಬಂದಿ ಉಪಸ್ಥಿತರಿದ್ದರು.