ರಾಯಚೂರು, ಅ.2: ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಾಗಿ ಉಳಿಯದೆ, ವಿದ್ಯಾರ್ಥಿಗಳಲ್ಲಿ ನೀತಿ, ನೈತಿಕತೆ, ವೈಚಾರಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಸಮಾಜಮುಖಿ ಹೊಸ ಪೀಳಿಗೆಯನ್ನು ರೂಪಿಸುವಂತಿರಬೇಕು ಎಂದು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದರು.

ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಅ.2ರಿಂದ 4ರವರೆಗೆ ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ವಿದ್ಯಾರ್ಥಿ ಶಿಬಿರದ ಮೊದಲ ದಿನದ ‘ಮಹಾನ್ ವ್ಯಕ್ತಿಗಳ ಕನಸುಗಳು ಮತ್ತು ಇಂದಿನ ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳು’ ವಿಷಯದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬ್ರಿಟಿಷರ ಆಡಳಿತದ ಅವಧಿಯಲ್ಲಿ ಅವರ ಆಡಳಿತ ವ್ಯವಸ್ಥೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಸಿದ್ಧಪಡಿಸುವ ದೃಷ್ಟಿಯಿಂದ ಶಿಕ್ಷಣ ಪದ್ಧತಿ ರೂಪಿಸಲಾಗಿತ್ತು. ಇದರಿಂದ ಸಾಮಾನ್ಯ ಜನರಿಗೆ ಶಿಕ್ಷಣದ ಅವಕಾಶಗಳು ಸಮರ್ಪಕವಾಗಿ ತಲುಪಲಿಲ್ಲ. ಬಳಿಕ ದೇಶದ ನವೋದಯ ಚಿಂತಕರು ನಡೆಸಿದ ಹೋರಾಟಗಳು ಶಿಕ್ಷಣವನ್ನು ಜನಸಾಮಾನ್ಯರ ಹಕ್ಕಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು ಎಂದು ಅವರು ಅಭಿಪ್ರಾಯಪಟ್ಟರು.

ಶಿಕ್ಷಣವನ್ನು ವ್ಯಾಪಾರದ ವಸ್ತುವನ್ನಾಗಿ ಪರಿಗಣಿಸದೆ ಎಲ್ಲರಿಗೂ ಸುಲಭವಾಗಿ ದೊರೆಯುವ ಸಾರ್ವಜನಿಕ ಹಕ್ಕಾಗಿ ಉಳಿಸಬೇಕು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯ ಹಣಕಾಸು ಒದಗಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಬೇಕು. ಶಿಕ್ಷಣವು ಯಾರೋ ನೀಡಿದ ಕೊಡುಗೆಯಲ್ಲ, ಜನರು ಹೋರಾಟದ ಮೂಲಕ ಪಡೆದುಕೊಂಡ ಹಕ್ಕಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಪಠ್ಯ ಮತ್ತು ಉದ್ಯೋಗದ ಚೌಕಟ್ಟಿಗೆ ಮಾತ್ರ ಸೀಮಿತರಾಗದೆ ವೈಜ್ಞಾನಿಕ ಮನೋಭಾವ, ಸಾಮಾಜಿಕ ಕಾಳಜಿ ಹಾಗೂ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿನ ಅನ್ಯಾಯ, ಅಸಮಾನತೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಸ್ಪಂದಿಸುವ ವ್ಯಕ್ತಿತ್ವವನ್ನು ರೂಪಿಸುವುದು ಶಿಕ್ಷಣದ ಉದ್ದೇಶವಾಗಬೇಕು ಎಂದು ಅಜಯ್ ಕಾಮತ್ ತಿಳಿಸಿದರು.

ಮೂರು ದಿನಗಳ ರಾಜ್ಯಮಟ್ಟದ ಶಿಬಿರದಲ್ಲಿ ವಿದ್ಯಾರ್ಥಿಗಳ ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದ ವಿವಿಧ ಗೋಷ್ಠಿಗಳು, ಸಂವಾದ ಹಾಗೂ ಚರ್ಚೆಗಳು ನಡೆಯಲಿವೆ.