ರಾಯಚೂರು, ಅ.2: ಆರೋಗ್ಯಕರ ಜೀವನಕ್ಕೆ ಸ್ವಚ್ಛ ಪರಿಸರ ಅತ್ಯಗತ್ಯವಾಗಿದ್ದು, ಸ್ವಚ್ಛತೆಯನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಮಲ್ಲಿಕಾರ್ಜುನ್ ಹೇಳಿದರು.
ನಗರದ ಕೆಇಬಿ ಕಾಲೊನಿಯ ಪಿಎಂ ಶ್ರೀ ಶಾಲೆಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶ್ರಮದಾನ ಕಾರ್ಯಕ್ರಮಕ್ಕೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಶ್ರಮ ಮತ್ತು ಸ್ವಚ್ಛತೆಯ ಆದರ್ಶಗಳನ್ನು ಕೇವಲ ಸ್ಮರಿಸಿದರೆ ಸಾಲದು, ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಂಡು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಮಾಜಕ್ಕೆ ನೀಡುವ ಮಹತ್ವದ ಕೊಡುಗೆಯಾಗಿದೆ ಎಂದರು.
ಗಾಂಧಿ ಜಯಂತಿ ಅಂಗವಾಗಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶ್ರಮದಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಶಾಲಾ ಆವರಣಗಳ ಸ್ವಚ್ಛತೆ ಹಾಗೂ ಗಿಡಮರಗಳ ಬೆಳೆಸುವಿಕೆಗೆ ಒತ್ತು ನೀಡಲಾಗುತ್ತಿದೆ. ಶಾಲೆಗಳಲ್ಲಿ ಆರೋಗ್ಯಕರ ಮತ್ತು ಹಸಿರು ವಾತಾವರಣ ನಿರ್ಮಿಸಲು ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳೊಂದಿಗೆ ಸಮುದಾಯದ ಸಹಭಾಗಿತ್ವವೂ ಅಗತ್ಯವಾಗಿದೆ ಎಂದು ತಿಳಿಸಿದರು.
**‘ನಮ್ಮ ಶಾಲೆ ಸುಂದರ ವನವಾಗಬೇಕಾದರೆ ಎಲ್ಲರ ಪರಿಶ್ರಮ ಅಗತ್ಯ. ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ಅದೇ ರೀತಿ ಶಾಲೆಯ ಅಭಿವೃದ್ಧಿಗೂ ಎಲ್ಲರ ಸಹಕಾರ ಮುಖ್ಯ’** ಎಂದು ಹೇಳಿದ ಅವರು, ಮಕ್ಕಳಲ್ಲಿ ಶ್ರಮದಾನದ ಮಹತ್ವವನ್ನು ಬೆಳೆಸಿದರೆ ತಮ್ಮ ಶಾಲೆಯನ್ನು ದೇಗುಲದಂತೆ ಕಾಣುವ ಮನೋಭಾವ ಮೂಡುತ್ತದೆ ಎಂದರು.
‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಅವರ ಆದರ್ಶಗಳಿಗೆ ಅನುಗುಣವಾಗಿ ನಾವು ಕಾರ್ಯಪ್ರವೃತ್ತರಾದಾಗ ಮಕ್ಕಳು ಸಹ ಅದನ್ನು ಅನುಸರಿಸುತ್ತಾರೆ ಎಂದು ಹೇಳಿದರು.
ಸಾಂಕೇತಿಕವಾಗಿ ಸಸಿಗಳನ್ನು ನೆಡುವುದಕ್ಕೆ ಮಾತ್ರ ಕಾರ್ಯಕ್ರಮ ಸೀಮಿತವಾಗಬಾರದು. ನೆಟ್ಟ ಸಸಿಗಳ ಪಾಲನೆ ಮತ್ತು ಪೋಷಣೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ ಅವರಲ್ಲಿ ಪರಿಸರ ಕಾಳಜಿ ಹಾಗೂ ಶ್ರಮದಾನದ ಅರಿವು ಬೆಳೆಯುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಈರಣ್ಣ ಕೋಸಗಿ, ಎಸ್ಡಿಎಂಸಿ ಅಧ್ಯಕ್ಷ ನಾಗೇಂದ್ರಪ್ಪ, ಮುಖ್ಯ ಶಿಕ್ಷಕಿ ಶಶಿಕಲಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜಶೇಖರ್ ಪಾಟೀಲ್, ಶಿಕ್ಷಣ ಸಂಯೋಜಕರಾದ ರಾಮಕೃಷ್ಣ ಕಟ್ಕಾವಲಿ, ಮಂಜುನಾಥ, ರಾಘವೇಂದ್ರ, ಶಿಕ್ಷಕರಾದ ವೆಂಕಟೇಶ ಜಾಲಿಬೆಂಚಿ, ಉರುಕುಂದ ನರಸಿಂಹರಾಜ, ನೀರಜ್, ದೇವರಾಜ್, ಸುನಂದಾ ಹಾಗೂ ಸಿಆರ್ಪಿ ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



