ರಾಯಚೂರು: ನಗರದ ಶಿಯಾ ತಲಾಬ್ ವ್ಯಾಪ್ತಿಯ ವಾರ್ಡ್ ನಂ.30 ಹಾಗೂ 31ಕ್ಕೆ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಭೇಟಿ ನೀಡಿ, ಅಲ್ಲಿನ ನಿವಾಸಿಗಳು ಎದುರಿಸುತ್ತಿರುವ ವಸತಿ, ರಸ್ತೆ, ಚರಂಡಿ ಹಾಗೂ ಬೀದಿ ದೀಪ ಸೇರಿದಂತೆ ವಿವಿಧ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಶೀಲಿಸಿದರು.
ವಾರ್ಡ್ ನಂ.30ರಲ್ಲಿ ಅತ್ಯಂತ ಸಣ್ಣ ಜಾಗದಲ್ಲಿ ನಿರ್ಮಿಸಿರುವ ತಗಡಿನ ಶೆಡ್ಗಳಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಭೇಟಿ ಮಾಡಿದ ಅವರು, ಸ್ಥಳೀಯರಿಂದ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. 10x10 ಅಡಿಗಿಂತಲೂ ಕಡಿಮೆ ವಿಸ್ತೀರ್ಣದ ಶೆಡ್ಗಳಲ್ಲಿ ಕುಟುಂಬಗಳು ವಾಸಿಸುತ್ತಿದ್ದು, ಮೂಲಸೌಕರ್ಯಗಳ ಕೊರತೆಯಿಂದ ಸಂಕಷ್ಟ ಎದುರಿಸುತ್ತಿರುವುದಾಗಿ ನಿವಾಸಿಗಳು ಅಳಲು ತೋಡಿಕೊಂಡರು.
ಸ್ಥಳೀಯ ಮಹಿಳೆಯೊಬ್ಬರು ಮಾತನಾಡಿ, ಸುಮಾರು ಐದು ವರ್ಷಗಳ ಹಿಂದೆ ವರ್ಧಮಾನ ಶಾಲೆ ಎದುರಿನ ಬಡಾವಣೆಯಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ ಮಳೆಯಿಂದ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆ ಬಳಿಕ ತಾತ್ಕಾಲಿಕವಾಗಿ ಎರಡು ವರ್ಷಗಳವರೆಗೆ ತಗಡಿನ ಶೆಡ್ಗಳಲ್ಲಿ ವಾಸಿಸಲು ವ್ಯವಸ್ಥೆ ಮಾಡಿ, ನಂತರ ಮೂಲ ಸ್ಥಳದಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಿ ಮನೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಐದು ವರ್ಷ ಕಳೆದರೂ ಶಾಶ್ವತ ವಸತಿ ಸೌಲಭ್ಯ ದೊರೆತಿಲ್ಲ ಎಂದು ಆರೋಪಿಸಿದರು.
ತಗಡಿನ ಶೆಡ್ಗಳಲ್ಲಿ ಸ್ನಾನ, ಅಡುಗೆ, ಪೂಜೆ ಹಾಗೂ ಮಲಗುವುದು ಸೇರಿದಂತೆ ಎಲ್ಲ ಚಟುವಟಿಕೆಗಳನ್ನೂ ಒಂದೇ ಸಣ್ಣ ಜಾಗದಲ್ಲಿ ನಡೆಸಬೇಕಾಗಿದೆ. ಸುತ್ತಮುತ್ತ ಕೊಳಚೆ ನೀರು ನಿಲ್ಲುವುದರಿಂದ ಹಾವು, ಚೇಳು ಸೇರಿದಂತೆ ವಿಷಜಂತುಗಳ ಭಯವೂ ಇದೆ. ವಿದ್ಯುತ್ ಅವಘಡಗಳಿಂದ ಜೀವಹಾನಿ ಹಾಗೂ ಗಾಯಗಳೂ ಸಂಭವಿಸಿವೆ ಎಂದು ನಿವಾಸಿಗಳು ರಾಮನಗೌಡ ಏಗನೂರು ಅವರ ಗಮನಕ್ಕೆ ತಂದರು.
ವಯಸ್ಸಿಗೆ ಬಂದ ಹೆಣ್ಣುಮಕ್ಕಳಿರುವ ಕುಟುಂಬಗಳಿಗೆ ಸೂಕ್ತ ವಸತಿ ಇಲ್ಲದಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸೌಲಭ್ಯ ಕಲ್ಪಿಸುವ ಭರವಸೆ ನೀಡುತ್ತಾರೆ. ಆದರೆ ಚುನಾವಣೆ ಮುಗಿದ ಬಳಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ವಾರ್ಡ್ ನಂ.31ರ ಆಟೋ ನಗರಕ್ಕೆ ಭೇಟಿ ನೀಡಿದ ರಾಮನಗೌಡ ಏಗನೂರು ಅಲ್ಲಿನ ರಸ್ತೆ ಮತ್ತು ಬೀದಿ ದೀಪಗಳ ಸ್ಥಿತಿಯನ್ನು ವೀಕ್ಷಿಸಿದರು. ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನಡೆದಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆ ಬಂದಾಗ ರಸ್ತೆಗಳಲ್ಲಿ ಮೊಣಕಾಲು ಮಟ್ಟದವರೆಗೆ ನೀರು ನಿಲ್ಲುವುದರಿಂದ ವಾಹನ ಸಂಚಾರದ ಜೊತೆಗೆ ಸ್ಥಳೀಯ ಮೆಕ್ಯಾನಿಕ್ ಅಂಗಡಿಗಳಿಗೂ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ದೂರಿದರು.
ಬೀದಿ ದೀಪದ ಕಂಬಗಳಿದ್ದರೂ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ರಾತ್ರಿ ವೇಳೆ ಪ್ರದೇಶ ಕತ್ತಲಲ್ಲಿ ಮುಳುಗುತ್ತಿದ್ದು, ರಸ್ತೆಗಳಲ್ಲಿ ಧೂಳಿನ ಸಮಸ್ಯೆಯೂ ಹೆಚ್ಚಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಮರ್ಪಕ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯರು ಆರೋಪಿಸಿದರು.
ಈ ಸಂದರ್ಭದಲ್ಲಿ ಆದಿರಾಜ್ ಉಪ್ಪಾರ, ವೀರೇಶ ಹಾಗೂ ರಾಜೀವ ಬಡಾವಣೆಯ ಸಾರ್ವಜನಿಕರು, ಮಹಿಳೆಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.



