ರಾಯಚೂರು, ಅ.2: ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸೇವೆ ಹಾಗೂ ಸರಳತೆಯ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆರ್ಯ ವೈಶ್ಯ ಸ್ಟೇಷನ್ ಏರಿಯಾ ಸಂಘದ ಅಧ್ಯಕ್ಷ ಪಾಗುಂಟ ಬಿ. ರಾಮಯ್ಯ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿರುವ ಮಹಾತ್ಮ ಗಾಂಧೀಜಿಯವರ ಪುತಳಿಗೆ ಆರ್ಯ ವೈಶ್ಯ ಸ್ಟೇಷನ್ ಏರಿಯಾ ಸಂಘದ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ‘ಮಹಾತ್ಮ ಗಾಂಧೀಜಿಗೆ ಜಯವಾಗಲಿ’, ‘ಭಾರತ್ ಮಾತಾಕಿ ಜೈ’ ಎಂಬ ಘೋಷಣೆಗಳನ್ನು ಕೂಗಲಾಯಿತು.
ನಂತರ ಮಾತನಾಡಿದ ಪಾಗುಂಟ ಬಿ. ರಾಮಯ್ಯ, ಸಂಘದ ವತಿಯಿಂದ 2017ರಿಂದ ನಿರಂತರವಾಗಿ ಗಾಂಧಿ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ 9ನೇ ವರ್ಷದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾಂಧೀಜಿಯವರ ಪುತಳಿಗೆ ಮಾಲಾರ್ಪಣೆ ಮಾಡುವುದಷ್ಟೇ ಅವರಿಗೆ ಸಲ್ಲಿಸುವ ಗೌರವವಾಗಬಾರದು. ಅವರ ತತ್ವ, ಆದರ್ಶ ಮತ್ತು ಸೇವಾ ಮನೋಭಾವವನ್ನು ಅನುಸರಿಸಿ ದೇಶ, ನಾಡು ಹಾಗೂ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಪ್ರಸ್ತುತ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಳಿಗೆ ಹಾನಿಯಾಗಿ ಆತಂಕ ಎದುರಿಸುತ್ತಿದ್ದಾರೆ. ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರ ಸಂಕಷ್ಟ ದೂರವಾಗಲಿ ಎಂದು ಗಾಂಧೀಜಿಯವರ ಸ್ಮರಣೆಯೊಂದಿಗೆ ಸಮೀಪದ ಆಂಜನೇಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಯಂತಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಂದಿನಿ ವೆಂಕಟೇಶ, ಬಲ್ಲಟಗಿ ಜಯಪ್ರಕಾಶ, ಎನ್. ರವಿ, ಟಿ. ವೆಂಕಟೇಶ, ಅಶೋಕ ಕುಮಾರ, ಮೈಲಾಪೂರ ಆನಂದ, ದೇವಗಿರಿ ಸತೀಶ ಕುಮಾರ, ಕೆ. ಮಲ್ಕಾಜಯ್ಯ, ವೈ. ನರೇಂದ್ರ ಕುಮಾರ, ಕೆ. ವೀರೇಶ ಬಾಬು, ಕೆ. ವೀರ ಪ್ರಕಾಶ, ಕೆ. ವೆಂಕಟೇಶ, ವಿಶ್ವನಾಥ ವೆಂಕಟೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.



