ಕಲ್ಮಲಾ: ಇಲ್ಲಿನ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೆ. ನಾಗರಾಜ ಮಾತನಾಡಿ, ಮಹಾತ್ಮ ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿ ಇಡೀ ಜಗತ್ತಿಗೆ ಮಾದರಿಯಾದರು. ಅನ್ಯಾಯವನ್ನು ವಿರೋಧಿಸಲು ದ್ವೇಷ ಅಥವಾ ಹಿಂಸೆಯ ಅಗತ್ಯವಿಲ್ಲ ಎಂಬುದನ್ನು ತಮ್ಮ ಹೋರಾಟಗಳ ಮೂಲಕ ತೋರಿಸಿಕೊಟ್ಟರು ಎಂದರು.
ಚಂಪಾರಣ್ಯ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ, ದಂಡಿ ಯಾತ್ರೆ ಸೇರಿದಂತೆ ಹಲವು ಚಳವಳಿಗಳ ಮೂಲಕ ಜನರನ್ನು ಸಂಘಟಿಸಿದ ಗಾಂಧೀಜಿ, ಸತ್ಯ ಮತ್ತು ಅಹಿಂಸೆಯನ್ನು ಅಸ್ತ್ರವಾಗಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಆತ್ಮಗೌರವದೊಂದಿಗೆ ಬದುಕುವುದು ಹಾಗೂ ಶಾಂತಿಯ ಮಾರ್ಗದಲ್ಲಿ ಅನ್ಯಾಯವನ್ನು ಎದುರಿಸುವುದು ಅವರ ಜೀವನ ಸಂದೇಶವಾಗಿತ್ತು ಎಂದು ಹೇಳಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆ, ಪ್ರಾಮಾಣಿಕತೆ ಹಾಗೂ ಧೈರ್ಯದಿಂದ ದೇಶದ ಸೇವೆ ಮಾಡಿದ ನಾಯಕರು. ರೈತರು ಮತ್ತು ಸೈನಿಕರ ಮಹತ್ವವನ್ನು ಸಾರಿದ ಅವರ **‘ಜೈ ಜವಾನ್, ಜೈ ಕಿಸಾನ್’** ಘೋಷಣೆ ಇಂದಿಗೂ ಭಾರತೀಯರಲ್ಲಿ ದೇಶಪ್ರೇಮ ಮತ್ತು ಆತ್ಮವಿಶ್ವಾಸ ಮೂಡಿಸುತ್ತಿದೆ. ಗಾಂಧೀಜಿ ಮತ್ತು ಶಾಸ್ತ್ರಿ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಸುಮಲತಾ, ಸಹ ಶಿಕ್ಷಕಿ ಸಂಗಮೇಶ್ವರಿ, ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೆ. ನಾಗರಾಜ, ಎಸ್ಡಿಎಂಸಿ ಅಧ್ಯಕ್ಷ ಚಂದ್ರು, ಕಲಾ ನಾಗರಾಜ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.



