ರಾಯಚೂರು, ಅ.2: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಗಣ್ಯರು ಉಭಯ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಕುಲಪತಿಗಳ ಅನುಪಸ್ಥಿತಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಶೋಧನಾ ನಿರ್ದೇಶಕ ಡಾ. ಎ. ಪ್ರಭುರಾಜ್ ಮಾತನಾಡಿ, ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಸ್ವಚ್ಛತೆಯ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ **‘ಜೈ ಜವಾನ್, ಜೈ ಕಿಸಾನ್’** ಸಂದೇಶ ಕೃಷಿ ಕ್ಷೇತ್ರದ ಮಹತ್ವವನ್ನು ಸಾರಿದ್ದು, ರೈತರು ಮತ್ತು ಸೈನಿಕರ ಕೊಡುಗೆಯನ್ನು ಸ್ಮರಿಸುವಂತೆ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡೀನ್ (ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ) ಹಾಗೂ ಆಡಳಿತಾಧಿಕಾರಿ ಡಾ. ರಾಜಣ್ಣ, ಸ್ನಾತಕೋತ್ತರ ನಿರ್ದೇಶಕ ಡಾ. ಎ.ಜಿ. ಶ್ರೀನಿವಾಸ್, ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಜಗಜೀವನ್ ರಾಮ್, ಗ್ರಂಥಪಾಲಕ ಹಾಗೂ ಎಸ್ಸಿ/ಎಸ್ಟಿ ಕೋಶದ ನಿರ್ದೇಶಕ ಡಾ. ಮಚೇಂದ್ರನಾಥ್ ಎಸ್., ಸಹ ಸಂಶೋಧನಾ ನಿರ್ದೇಶಕ ಡಾ. ಮಹಾದೇವ ಸ್ವಾಮಿ, ಆಸ್ತಿ ಅಧಿಕಾರಿ ಮೇಸ್ತ್ರ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶನಾಲಯ ಕಾರ್ಯಕ್ರಮ ಆಯೋಜಿಸಿತ್ತು. ಮುಖ್ಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಸಂಗಣ್ಣ ಸಜ್ಜನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



