ಮಾನ್ವಿ: ನಿಯಮಿತ ಯೋಗಾಭ್ಯಾಸ ಹಾಗೂ ಸಾತ್ವಿಕ ಆಹಾರ ಪದ್ಧತಿಯಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಯೋಗ ಗುರು ಅನ್ನದಾನಯ್ಯ ಸ್ವಾಮಿ ಹೇಳಿದರು.
ಪಟ್ಟಣದ ಶಾರದಾ ಬಿ.ಎಡ್. ಕಾಲೇಜಿನಲ್ಲಿ ಯೋಗ ಸನ್ನಿಧಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಚಿತ್ತವೃತ್ತಿ ನಿರೋಧಃ’ ಎಂಬ ಯೋಗದ ಪರಿಕಲ್ಪನೆಯನ್ನು ವಿವರಿಸಿದ ಅವರು, ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸಿ ಏಕಾಗ್ರತೆ ಸಾಧಿಸಲು ಯೋಗ ಸಹಕಾರಿಯಾಗಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿ ಎಂಬ ಅಷ್ಟಾಂಗಗಳು ಯೋಗದ ಪ್ರಮುಖ ಭಾಗಗಳಾಗಿವೆ. ಪ್ರತಿದಿನ ಸ್ವಲ್ಪ ಸಮಯ ಯೋಗಾಸನ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ದೇಹ ಹಾಗೂ ಮನಸ್ಸನ್ನು ಆರೋಗ್ಯಕರವಾಗಿಟ್ಟುಕೊಳ್ಳಬಹುದು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಪರಮೇಶ್ವರಪ್ಪ ಗೋಪಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಯೋಗಾಭ್ಯಾಸಕ್ಕೆ ಸಮಯ ಮೀಸಲಿಟ್ಟು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಶಿಬಿರದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಸರಳ ಯೋಗಾಸನಗಳು, ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಾಭ್ಯಾಸಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು. ಇದೇ ಸಂದರ್ಭದಲ್ಲಿ ಯೋಗ ಗುರು ಅನ್ನದಾನಯ್ಯ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಚಾರ್ಯ ವೀರಭದ್ರಯ್ಯ ಹಿರೇಮಠ, ಉಪನ್ಯಾಸಕ ಆನಂದ್, ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.



