ಮಾನ್ವಿ: ಪಟ್ಟಣದಲ್ಲಿ ಭಾನುವಾರ ನಡೆಯಲಿರುವ ಗ್ರಾಮಾಡಳಿತ ಅಧಿಕಾರಿಗಳ ನೇಮಕಾತಿ ಪರೀಕ್ಷೆಗೆ ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಒಟ್ಟು 7 ಪರೀಕ್ಷಾ ಕೇಂದ್ರಗಳಲ್ಲಿ 1,920 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಅಭ್ಯರ್ಥಿಗಳ ಅನುಕೂಲಕ್ಕಾಗಿ ಪಟ್ಟಣದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಸ್.ಆರ್.ಎಸ್.ವಿ.ಎಸ್. ಗಾಂಧಿ ಪಿಯು ಕಾಲೇಜು, ಲೋಯೋಲ ಪಿಯು ಕಾಲೇಜು, ಶಾರದಾ ವಿದ್ಯಾನಿಕೇತನ, ಕಾಳಿಂಗ ಪಿಯು ಕಾಲೇಜು, ಸರ್ಕಾರಿ ಬಾಲಕರ ಪಿಯು ಕಾಲೇಜು, ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಹಾಗೂ ಎಸ್.ಪಿ.ವಿ. ಕಲ್ಮಠ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ.

ಲೋಯೋಲ ಪಿಯು ಕಾಲೇಜಿನಲ್ಲಿ 360, ಶಾರದಾ ವಿದ್ಯಾನಿಕೇತನದಲ್ಲಿ 240, ಕಾಳಿಂಗ ಪಿಯು ಕಾಲೇಜಿನಲ್ಲಿ 240, ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ 240, ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ 240 ಹಾಗೂ ಎಸ್.ಪಿ.ವಿ. ಕಲ್ಮಠ ಕಾಲೇಜಿನಲ್ಲಿ 360 ಅಭ್ಯರ್ಥಿಗಳು ಸೇರಿದಂತೆ ಏಳು ಕೇಂದ್ರಗಳಲ್ಲಿ ಒಟ್ಟು 1,920 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು 6 ಮಾರ್ಗಾಧಿಕಾರಿಗಳು, 7 ವೀಕ್ಷಕರು, ನೋಡಲ್ ಅಧಿಕಾರಿಗಳು ಹಾಗೂ ಪರಿವೀಕ್ಷಕರನ್ನು ನಿಯೋಜಿಸಲಾಗಿದೆ. ಪರೀಕ್ಷೆ ವೇಳೆ ಅಭ್ಯರ್ಥಿಗಳಿಗೆ ಆರೋಗ್ಯ ಸಮಸ್ಯೆ ಎದುರಾದರೆ ತಕ್ಷಣ ನೆರವು ನೀಡಲು ಆರೋಗ್ಯ ಇಲಾಖೆಯ ತಪಾಸಣಾ ತಂಡವನ್ನೂ ನಿಯೋಜಿಸಲಾಗಿದೆ.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದ್ದು, ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಹಾಗೂ ಸ್ಕ್ರೀನಿಂಗ್ ವ್ಯವಸ್ಥೆ ಕೈಗೊಳ್ಳಲಾಗಿದೆ.