ರಾಯಚೂರು: ಮಡಿವಾಳ ಮಾಚಿದೇವ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಯು. ಆಂಜನೇಯ್ಯ ಹಾಗೂ ಗೌರವಾಧ್ಯಕ್ಷರಾಗಿ ಬಿ. ವಿರೂಪಾಕ್ಷ ಅವರನ್ನು ಸಮಾಜದ ಹಿರಿಯರು ಹಾಗೂ ಸದಸ್ಯರ ಸಮ್ಮುಖದಲ್ಲಿ ಸರ್ವಾನುಮತದಿಂದ, ನಿಯಮಾನುಸಾರ ಆಯ್ಕೆ ಮಾಡಲಾಗಿದೆ. ಈ ಆಯ್ಕೆಯನ್ನು ಅನಧಿಕೃತ ಎಂದು ಹೇಳುವ ಮೂಲಕ ಮಾಜಿ ಅಧ್ಯಕ್ಷ ಜಂಬಣ್ಣ ಯಕ್ಲಾಸಪೂರ ಅವರು ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಮಾಜದ ಮುಖಂಡ ಜಿ. ಶಿವಮೂರ್ತಿ ಹೇಳಿದರು.

ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.30ರಂದು ಜಂಬಣ್ಣ ಯಕ್ಲಾಸಪೂರ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನೂತನ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರ ಆಯ್ಕೆ ಅನಧಿಕೃತ ಎಂದು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟಪಡಿಸಿದರು.

ಜಂಬಣ್ಣ ಯಕ್ಲಾಸಪೂರ ಅವರು 2023ರ ಆಗಸ್ಟ್‌ನಲ್ಲಿ ಸಮಾಜದ ಸಮುದಾಯ ಭವನದಲ್ಲಿ ಹಿರಿಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಅವರ ಅಧ್ಯಕ್ಷತೆಯಲ್ಲಿಯೇ ಶ್ರಾವಣ ಅಮಾವಾಸ್ಯೆ ಅಂಗವಾಗಿ ಸಮುದಾಯ ಭವನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಈ ಕುರಿತು 2023ರ ಆಗಸ್ಟ್ 22 ಹಾಗೂ ಸೆಪ್ಟೆಂಬರ್ 5ರಂದು ಪತ್ರಿಕೆಗಳಲ್ಲಿಯೂ ವರದಿಗಳು ಪ್ರಕಟವಾಗಿವೆ ಎಂದು ತಿಳಿಸಿದರು.

2022-23ನೇ ಸಾಲಿನ ವಾರ್ಷಿಕ ಮಹಾಸಭೆಗೆ ಸಂಬಂಧಿಸಿದ ದಾಖಲೆಗಳು, ಪದಾಧಿಕಾರಿಗಳ ಆಯ್ಕೆ ಮಾಹಿತಿ ಹಾಗೂ 2019-20ರಿಂದ 2022-23ರವರೆಗಿನ ಲೆಕ್ಕಪರಿಶೋಧನಾ ವರದಿಗಳನ್ನು 2023ರ ಸೆಪ್ಟೆಂಬರ್ 13ರಂದು ಸಂಘಗಳ ನೋಂದಣಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಗೌರವಾಧ್ಯಕ್ಷ ಟಿ. ಮಲ್ಲೇಶ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯ ನಿರ್ಣಯಗಳ ಪಟ್ಟಿಯನ್ನೂ ಅಂದೇ ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ದಾಖಲೆಗಳ ಪ್ರಕಾರ ಜಂಬಣ್ಣ ಯಕ್ಲಾಸಪೂರ ಅವರು 2023ರ ಆಗಸ್ಟ್‌ನಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಅವರ ಮೂರು ವರ್ಷದ ಅವಧಿ 2026ರ ಆಗಸ್ಟ್‌ನಲ್ಲಿ ಪೂರ್ಣಗೊಂಡಿದೆ. ಹೀಗಿರುವಾಗ ಇನ್ನೂ ಒಂಬತ್ತು ತಿಂಗಳ ಅಧಿಕಾರಾವಧಿ ಬಾಕಿ ಇದೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಶಿವಮೂರ್ತಿ ಪ್ರತಿಪಾದಿಸಿದರು.

ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಂಬಣ್ಣ ಅವರೇ ಸೆ.27ರಂದು ಸಮಾಜದ ಸಮುದಾಯ ಭವನದಲ್ಲಿ ಸರ್ವಸದಸ್ಯರ ಸಭೆ ಕರೆದಿದ್ದರು. ಈ ಸಭೆಯ ಕುರಿತು ಪತ್ರಿಕೆಯಲ್ಲಿ ನೋಟಿಸ್ ಕೂಡ ಪ್ರಕಟವಾಗಿತ್ತು. ನೂತನ ಜಿಲ್ಲಾಧ್ಯಕ್ಷರ ಆಯ್ಕೆಯ ಕುರಿತು ಸಮಾಜ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಅವರೇ ತಿಳಿಸಿದ್ದರು ಎಂದರು.

ಇದರ ಮುಂದುವರಿದ ಭಾಗವಾಗಿ ಸೆ.29ರಂದು ಮಡಿವಾಳ ಸಮಾಜದ ಸಮುದಾಯ ಭವನದಲ್ಲಿ ಅನೇಕ ಹಿರಿಯ ಮುಖಂಡರು ಹಾಗೂ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ, ಸರ್ವಾನುಮತದಿಂದ ಯು. ಆಂಜನೇಯ್ಯ ಅವರನ್ನು ನೂತನ ಜಿಲ್ಲಾಧ್ಯಕ್ಷರನ್ನಾಗಿ ಹಾಗೂ ಬಿ. ವಿರೂಪಾಕ್ಷ ಅವರನ್ನು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಆಯ್ಕೆಯಲ್ಲಿ ಯಾವುದೇ ಒತ್ತಡ ಅಥವಾ ಸರ್ವಾಧಿಕಾರಿ ಧೋರಣೆ ಅನುಸರಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮಾಜದಲ್ಲಿ ಎಲ್ಲರಿಗೂ ಅವಕಾಶ ಮತ್ತು ಅಧಿಕಾರ ದೊರೆಯಬೇಕು ಎಂಬುದು ಹಿರಿಯರ ಆಶಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಧ್ಯಕ್ಷರಾಗುವ ಅವಕಾಶ ಇರಬೇಕು. ಇಲ್ಲಿ ವ್ಯಕ್ತಿಗಿಂತ ಸಮಾಜವೇ ದೊಡ್ಡದು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಹೇಳಿದರು.

ಜಂಬಣ್ಣ ಯಕ್ಲಾಸಪೂರ ಅವರು ತಮ್ಮ ಮೂರು ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ ಎಷ್ಟು ಬಾರಿ ಸಾಮಾನ್ಯ ಸಭೆ ಕರೆದಿದ್ದಾರೆ, ಸಮುದಾಯ ಭವನಕ್ಕೆ ಎಷ್ಟು ಬಾರಿ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ ಹಾಗೂ ಸಮಾಜದ ಜನರ ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳಿಂದ ದೊರೆತ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಅಧ್ಯಕ್ಷ ಸ್ಥಾನದಲ್ಲಿರುವ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶಿವಮೂರ್ತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟಿ. ಮಲ್ಲೇಶ್, ನರಸಪ್ಪ ವೈ., ಯು. ಆಂಜನೇಯ್ಯ, ಬಿ. ವಿರೂಪಾಕ್ಷ, ಜಿ. ಸುಗಪ್ಪ, ಜಿ. ವೆಂಕಟೇಶ್, ಇ. ಚಂದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.