ಕವಿತಾಳ: ಮಸ್ಕಿ ತಾಲೂಕಿನಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಲು ಆಗಮಿಸಿರುವ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧ್ಯಯನ ತಂಡವು ಅಮೀನಗಡ ಮತ್ತು ಕೋಟೆಕಲ್ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮಳೆಯ ಕೊರತೆಯಿಂದ ಒಣಗಿ ಕಮರಿರುವ ವಿವಿಧ ಬೆಳೆಗಳನ್ನು ತಂಡದ ಅಧಿಕಾರಿಗಳು ಖುದ್ದಾಗಿ ವೀಕ್ಷಿಸಿ, ಹಾನಿಯ ಪ್ರಮಾಣದ ಕುರಿತು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಹೊಲಗಳಿಗೆ ಭೇಟಿ ನೀಡಿದ ತಂಡವು ಬೆಳೆಗಳ ಸ್ಥಿತಿಯನ್ನು ಪರಿಶೀಲಿಸುವುದರ ಜೊತೆಗೆ ರೈತರೊಂದಿಗೆ ನೇರವಾಗಿ ಸಮಾಲೋಚನೆ ನಡೆಸಿತು.

ಮಳೆ ಕೈಕೊಟ್ಟ ಪರಿಣಾಮ ಎದುರಿಸಿರುವ ಬೆಳೆ ನಷ್ಟ, ಬಿತ್ತನೆಗಾಗಿ ಮಾಡಿರುವ ಖರ್ಚು, ಕೃಷಿ ಸಾಲ ಹಾಗೂ ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಕುರಿತು ರೈತರು ಕೇಂದ್ರ ತಂಡದ ಮುಂದೆ ತಮ್ಮ ಅಳಲು ತೋಡಿಕೊಂಡರು. ಬರ ಪರಿಸ್ಥಿತಿಯಿಂದ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗಿರುವ ಪರಿಣಾಮವನ್ನೂ ಅಧಿಕಾರಿಗಳಿಗೆ ವಿವರಿಸಿದರು.

ರೈತರಿಂದ ಮಾಹಿತಿ ಪಡೆದ ತಂಡದ ಸದಸ್ಯರು, ಬರ ಪರಿಸ್ಥಿತಿ ಮತ್ತು ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ತಂಡದ ಅಧಿಕಾರಿಗಳಾದ ಡಾ. ಮಾನ್ ಸಿಂಗ್, ಪಾರ್ಥ ಪಾಲ್, ರಾಕೇಶ್ ಕುಮಾರ್, ರಾಯಚೂರು ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.