ರಾಯಚೂರು, ಅ.5: ಅನಪೇಕ್ಷಿತ ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಕಾನೂನುಬದ್ಧ, ಸುರಕ್ಷಿತ ಹಾಗೂ ಗುಣಮಟ್ಟದ ಗರ್ಭಪಾತ ಸೇವೆಗಳು ದೊರೆಯುವುದು ಅತ್ಯಂತ ಅಗತ್ಯವಾಗಿದ್ದು, ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿಯೇ ಗರ್ಭಪಾತ ಸೇವೆ ಪಡೆಯಬೇಕು. ಇಂತಹ ಸಂದರ್ಭಗಳಲ್ಲಿ ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನಗಳನ್ನು ಸಹ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಇಮ್ರಾನ್ ಪರ್ವೇಜ್ ತಿಳಿಸಿದರು.
ಸುರಕ್ಷಿತ ಗರ್ಭಪಾತ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗ ಹಾಗೂ ರಾಯಚೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವತಿಯಿಂದ ಆಸ್ಪತ್ರೆಯಲ್ಲಿ ತಾಯಂದಿರಿಗಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರೆಗಳ ಮೂಲಕ ಗರ್ಭಪಾತ ಮಾಡಿಸಿಕೊಳ್ಳುವುದು ಸುರಕ್ಷಿತವಾಗಿದೆ. ಮಹಿಳೆಯರಿಗೆ ಅಗತ್ಯ ವೈದ್ಯಕೀಯ ಸಲಹೆ ಮತ್ತು ಸುರಕ್ಷಿತ ಸೇವೆಗಳು ಸುಲಭವಾಗಿ ದೊರೆಯುವಂತಾಗಬೇಕು. ಗರ್ಭಪಾತಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದರು.
ಭಾರತದಲ್ಲಿ 1971ರ ವೈದ್ಯಕೀಯ ಗರ್ಭಪಾತ ಕಾಯ್ದೆಗೆ 2021ರಲ್ಲಿ ತಿದ್ದುಪಡಿ ತರಲಾಗಿದ್ದು, ನಿಗದಿತ ಷರತ್ತುಗಳಡಿ 20 ವಾರಗಳವರೆಗೆ ಒಬ್ಬ ನೋಂದಾಯಿತ ವೈದ್ಯರ ಅಭಿಪ್ರಾಯ ಹಾಗೂ 20ರಿಂದ 24 ವಾರಗಳವರೆಗೆ ನಿರ್ದಿಷ್ಟ ವರ್ಗದ ಪ್ರಕರಣಗಳಲ್ಲಿ ಇಬ್ಬರು ನೋಂದಾಯಿತ ವೈದ್ಯರ ಅಭಿಪ್ರಾಯದೊಂದಿಗೆ ಗರ್ಭಪಾತಕ್ಕೆ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸೂತಿ ತಜ್ಞೆ ಡಾ. ಉಜ್ಮಾ ಯಾಸ್ಮೀನ್ ಮಾತನಾಡಿ, ಗರ್ಭಪಾತ ಸೇವೆ ಪಡೆಯುವ ಮಹಿಳೆಯ ವೈಯಕ್ತಿಕ ವಿವರ ಮತ್ತು ಗುರುತಿನ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದು ತಿಳಿಸಿದರು.
ವೈದ್ಯರ ಸಲಹೆಯಿಲ್ಲದೆ ಮಾತ್ರೆ ಸೇವನೆ ಅಪಾಯಕಾರಿ
ಸುರಕ್ಷಿತ ಗರ್ಭಪಾತವು ಮಹಿಳೆಯ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಗರ್ಭಾವಸ್ಥೆಯ ಅವಧಿ ಹಾಗೂ ಮಹಿಳೆಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ವೈದ್ಯಕೀಯ ವಿಧಾನ ಅಥವಾ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸಾ ವಿಧಾನವನ್ನು ತಜ್ಞ ವೈದ್ಯರು ನಿರ್ಧರಿಸುತ್ತಾರೆ. ವೈದ್ಯರ ಸಲಹೆ ಮತ್ತು ಮೇಲ್ವಿಚಾರಣೆ ಇಲ್ಲದೆ ಸ್ವಂತ ನಿರ್ಧಾರದಿಂದ ಗರ್ಭಪಾತದ ಮಾತ್ರೆಗಳನ್ನು ಸೇವಿಸುವುದು ಅಪಾಯಕಾರಿಯಾಗಿದೆ ಎಂದು ಡಾ. ಉಜ್ಮಾ ಯಾಸ್ಮೀನ್ ಎಚ್ಚರಿಸಿದರು.
ಗರ್ಭಪಾತದ ನಂತರ ಸೋಂಕು ತಡೆಗಟ್ಟಲು ಅಗತ್ಯ ವಿಶ್ರಾಂತಿ, ವೈದ್ಯರು ಸೂಚಿಸಿದ ಔಷಧಿಗಳ ಸೇವನೆ ಹಾಗೂ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು ಮುಖ್ಯ. ಸರ್ಕಾರದಿಂದ ಅನುಮೋದಿತ ಆಸ್ಪತ್ರೆ ಅಥವಾ ಅರ್ಹ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿಯೇ ಸೇವೆ ಪಡೆಯಬೇಕು. ಅನಧಿಕೃತ ಚಿಕಿತ್ಸಾ ಕೇಂದ್ರಗಳು ಅಥವಾ ವೈದ್ಯಕೀಯವಾಗಿ ದೃಢೀಕರಿಸದ ಮನೆಮದ್ದುಗಳಿಗೆ ಮೊರೆಹೋಗುವುದು ಆರೋಗ್ಯ ಮತ್ತು ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರವಳಿಕೆ ತಜ್ಞ ಡಾ. ಸರ್ಫರಾಜ್ ಖಾಜಿ, ರೇಡಿಯಾಲಜಿಸ್ಟ್ ಡಾ. ಭುವನೇಶ್ವರಿ, ಫಿಸಿಷಿಯನ್ ಡಾ. ಬಶೀಫ್ ಲತೀಫ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಪುಂಡಲೀಕ ಗಂಜಿ, ಹಿರಿಯ ಶುಶ್ರೂಷಾಧಿಕಾರಿ ಸಲೋಮಿ, ಹಿರಿಯ ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಲಕ್ಷ್ಮಿ, ಫಾರ್ಮಸಿ ಅಧಿಕಾರಿ ದೊಡ್ಡಮ್ಮ, ಕುಟುಂಬ ಕಲ್ಯಾಣ ಆಪ್ತ ಸಮಾಲೋಚಕಿ ನಿಮಿಷಾ, ಆರೋಗ್ಯ ಮಿತ್ರ ತುಳಸಿದಾಸ್, ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ತಾಯಂದಿರು ಭಾಗವಹಿಸಿದ್ದರು.



