ಮಾನ್ವಿ: ದೇಶದ ವೈವಿಧ್ಯತೆಯನ್ನು ಗೌರವಿಸುವುದರೊಂದಿಗೆ ಏಕತೆ ಮತ್ತು ಸೌಹಾರ್ದದ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜೆ.ಎಲ್. ಈರಣ್ಣ ಹೇಳಿದರು.

ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸಂಸ್ಕೃತಿ ಪುನಶ್ಚೇತನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಪರಸ್ಪರ ಪ್ರೀತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಾಗಿದೆ. ದ್ವೇಷ ಮತ್ತು ಭೇದಭಾವದಿಂದ ದೂರವಿದ್ದು ಸಮಾಜದಲ್ಲಿ ಸೌಹಾರ್ದದ ವಾತಾವರಣ ನಿರ್ಮಿಸುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ಕನಕದಾಸರು ಹಾಗೂ ತತ್ವಪದಕಾರರ ಸಾಹಿತ್ಯ ಮತ್ತು ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ ಎಂದರು.

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಂಶೋಧನಾ ಸಹಾಯಕ ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸಂಸ್ಕೃತಿ ಪುನಶ್ಚೇತನ ಶಿಬಿರದ ಜಿಲ್ಲಾ ಸಂಚಾಲಕಿ ರೇಣುಕಾ ಕೋಡಗುಂಟಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಉದ್ದೇಶ ಮತ್ತು ಚಟುವಟಿಕೆಗಳ ಕುರಿತು ವಿವರಿಸಿದರು.

ಶಿಬಿರದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ 135 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ 75 ವಿದ್ಯಾರ್ಥಿಗಳು ಸಂತಕವಿ ಕನಕದಾಸ ಮತ್ತು ತತ್ವಪದಕಾರರಿಗೆ ಸಂಬಂಧಿಸಿದ ಪ್ರಬಂಧ, ವೈಚಾರಿಕ ಭಾಷಣ ಹಾಗೂ ಓದು ವ್ಯಾಖ್ಯಾನ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

ಪ್ರಬಂಧ ಸ್ಪರ್ಧೆಯಲ್ಲಿ 15 ವಿದ್ಯಾರ್ಥಿಗಳು, ವೈಚಾರಿಕ ಭಾಷಣ ಸ್ಪರ್ಧೆಯಲ್ಲಿ 14 ಹಾಗೂ ಓದು ವ್ಯಾಖ್ಯಾನ ಸ್ಪರ್ಧೆಯಲ್ಲಿ 9 ವಿದ್ಯಾರ್ಥಿಗಳು ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸೈಯದ್ ಮಿನಾಜುಲ್ ಹಸನ್, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಶಶಿಧರ, ಶಿಬಿರದ ಸಹ ಸಂಚಾಲಕರಾದ ಡಾ. ಸೈಯದ್ ಮುಜೀಬ್ ಅಹ್ಮದ್, ಡಾ. ಬಸವರಾಜ ಸುಂಕೇಶ್ವರ ಹಾಗೂ ಬಸವರಾಜ ಭೋಗಾವತಿ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಡಾ. ಹುಲಿಯಪ್ಪ ಧುಮತಿ ಮತ್ತು ವೀರೇಶ ಸಾಸಲಮರಿ ಕಾರ್ಯಕ್ರಮ ನಿರೂಪಿಸಿದರು. ಮೇರಿ ಗ್ರೇಸಿ ಸ್ವಾಗತಿಸಿದರು. ಡಿ. ಮಂಜುನಾಥ ವಂದಿಸಿದರು.