ಮಂತ್ರಾಲಯ: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ (NCSK) ಸದಸ್ಯ ಹಾಗೂ ಉಪಾಧ್ಯಕ್ಷ ಹರದೀಪ್ ಸಿಂಗ್ ಗಿಲ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಆಶೀರ್ವಾದ ಪಡೆದರು.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಆಗಮಿಸಿದ ಹರದೀಪ್ ಸಿಂಗ್ ಗಿಲ್ ಅವರು ಶ್ರೀ ರಾಯರ ಮೂಲ ವೃಂದಾವನದ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಜನತೆಯ ಒಳಿತು, ಶಾಂತಿ ಹಾಗೂ ಸಮೃದ್ಧಿಗಾಗಿ ಶ್ರೀ ರಾಯರಲ್ಲಿ ಪ್ರಾರ್ಥಿಸಿದರು.

ಬಳಿಕ ಶ್ರೀಮಠದ ಪೀಠಾಧಿಪತಿಗಳಾದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ಹರದೀಪ್ ಸಿಂಗ್ ಗಿಲ್ ಅವರಿಗೆ ಸಂಪ್ರದಾಯಬದ್ಧವಾಗಿ ಮುದ್ರಾಧಾರಣೆ ನೆರವೇರಿಸಿ, ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಭೇಟಿ ನೀಡಿರುವುದು ಸಂತಸ ತಂದಿದ್ದು, ಮಂತ್ರಾಲಯವು ಅಪಾರ ಭಕ್ತರ ಶ್ರದ್ಧಾ ಕೇಂದ್ರವಾಗಿ ದೇಶದ ವಿವಿಧ ಭಾಗಗಳ ಜನರನ್ನು ಆಕರ್ಷಿಸುತ್ತಿದೆ ಎಂದು ಹರದೀಪ್ ಸಿಂಗ್ ಗಿಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀಮಠದ ಪ್ರಮುಖರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.