ರಾಯಚೂರು, ಅ.7: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ-2026ರ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ವತಿಯಿಂದ ಬುಧವಾರ ನಗರದ ಮಾ ಆಶಾಪುರಿ ಫಂಕ್ಷನ್ ಹಾಲ್‌ನಲ್ಲಿ ಜಿಲ್ಲಾಮಟ್ಟದ ಜಂಟಿ ಪೂರ್ವಭಾವಿ ಸಭೆ ನಡೆಯಿತು.

ಮುಂಬರುವ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು, ಶಿಕ್ಷಕ ಮತದಾರರನ್ನು ನೇರವಾಗಿ ಸಂಪರ್ಕಿಸುವುದು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚಿಸುವುದು ಹಾಗೂ ತಾಲೂಕುವಾರು ಚುನಾವಣಾ ಕಾರ್ಯತಂತ್ರ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ವೀರನಗೌಡ ಲಕ್ಕಿಹಾಳ್, ಚುನಾವಣೆಗೆ ಸಮಯ ಕಡಿಮೆ ಇರುವುದರಿಂದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪರಸ್ಪರ ಸಮನ್ವಯದೊಂದಿಗೆ ಕೆಲಸ ಮಾಡಬೇಕಾಗಿದೆ. ಈಗಾಗಲೇ ಜಿಲ್ಲೆಯ ವಿವಿಧ ಶಾಲೆ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕ ಮತದಾರರನ್ನು ಸಂಪರ್ಕಿಸಿ ಬೆಂಬಲ ಕೋರಲಾಗುತ್ತಿದೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮೈತ್ರಿಯ ಆಶಯದಂತೆ ಒಂದಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು. ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಜೆಡಿಎಸ್ ಸಂಪೂರ್ಣ ಸಹಕಾರದೊಂದಿಗೆ ಮುಂದೆ ಬಂದಿದ್ದು, ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ತಾಲೂಕು ಮಟ್ಟದಿಂದಲೇ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ರವಿಕುಮಾರ್ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 786 ಶಿಕ್ಷಣ ಸಂಸ್ಥೆಗಳಿದ್ದು, 5,137 ಮತದಾರರಿದ್ದಾರೆ. ಪ್ರತಿಯೊಬ್ಬ ಶಿಕ್ಷಕ ಮತದಾರರನ್ನು ತಲುಪುವ ನಿಟ್ಟಿನಲ್ಲಿ ತಾಲೂಕುವಾರು ಯೋಜನೆ ರೂಪಿಸಿ ಪ್ರಚಾರ ಕಾರ್ಯ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ ರಾಯಚೂರು ತಾಲೂಕಿನಲ್ಲಿ ಅತಿ ಹೆಚ್ಚು 227 ಸಂಸ್ಥೆಗಳು ಹಾಗೂ 2,146 ಮತದಾರರಿದ್ದಾರೆ. ಸಿಂಧನೂರಿನಲ್ಲಿ 159 ಸಂಸ್ಥೆಗಳು ಮತ್ತು 900 ಮತದಾರರು, ಲಿಂಗಸುಗೂರಿನಲ್ಲಿ 144 ಸಂಸ್ಥೆಗಳು ಮತ್ತು 789 ಮತದಾರರು, ಮಾನ್ವಿಯಲ್ಲಿ 73 ಸಂಸ್ಥೆಗಳು ಮತ್ತು 387 ಮತದಾರರು, ದೇವದುರ್ಗದಲ್ಲಿ 66 ಸಂಸ್ಥೆಗಳು ಮತ್ತು 302 ಮತದಾರರು, ಸಿರವಾರದಲ್ಲಿ 54 ಸಂಸ್ಥೆಗಳು ಮತ್ತು 259 ಮತದಾರರು, ಮಸ್ಕಿಯಲ್ಲಿ 32 ಸಂಸ್ಥೆಗಳು ಮತ್ತು 202 ಮತದಾರರು ಹಾಗೂ ಅರಕೇರಾದಲ್ಲಿ 25 ಸಂಸ್ಥೆಗಳು ಮತ್ತು 134 ಮತದಾರರಿದ್ದಾರೆ ಎಂದು ಮಾಹಿತಿ ನೀಡಲಾಯಿತು.

ಶಿಕ್ಷಕ ಮತದಾರರನ್ನು ನೇರವಾಗಿ ತಲುಪಲು ಮುಖಂಡರ ತಂಡಗಳನ್ನು ರಚಿಸುವುದು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡುವುದು, ತಾಲೂಕುವಾರು ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡುವುದು ಹಾಗೂ ಮತದಾನದವರೆಗೆ ನಿರಂತರವಾಗಿ ಮತದಾರರೊಂದಿಗೆ ಸಂಪರ್ಕದಲ್ಲಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ರವಿಕುಮಾರ್, ವೆಂಕಟರಾವ್ ನಾಡಗೌಡ, ಬಿ.ವಿ. ನಾಯಕ, ಎಂ. ವಿರೂಪಾಕ್ಷಿ, ಡಾ. ಶಿವರಾಜ ಪಾಟೀಲ್, ವೀರನಗೌಡ ಲಕ್ಕಿಹಾಳ್, ಕರಿಯಮ್ಮ ಜಿ. ನಾಯಕ, ರಾಜಾ ವೆಂಕಟಪ್ಪ ನಾಯಕ, ಪ್ರತಾಪ ಪಾಟೀಲ್, ಮಂಟೇಶ್ ಪಾಟೀಲ್, ನರಸಿಂಹ ನಾಯಕ, ಕೆ. ಕರಿಯಪ್ಪ, ಮಾನಪ್ಪ ವಾಗಲ್ ಸೇರಿದಂತೆ ಉಭಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ರವೀಂದ್ರ ಜಲ್ದಾರ್, ಶರಣಬಸವ ಜೋಳದಡಗಿ, ರಾಘವೇಂದ್ರ ಉಟ್ಕೂರ್, ಶಂಕರರೆಡ್ಡಿ, ನರಸಿಂಹ, ಶಿವಶಂಕರ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌ನ ವಿವಿಧ ತಾಲೂಕುಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಜಿಲ್ಲಾದ್ಯಂತ ಸಂಘಟಿತ ಹಾಗೂ ಜಂಟಿ ಪ್ರಚಾರ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಿ ಕಾರ್ಯತಂತ್ರ ರೂಪಿಸಲಾಯಿತು.