ರಾಯಚೂರು, ಅ.7: ಭಾರತೀಯ ಜನತಾ ಪಕ್ಷದ ರಾಯಚೂರು ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಸಿದ್ದು ಹೂಗಾರ್ ಅವರನ್ನು ನೇಮಕ ಮಾಡಲಾಗಿದ್ದು, ಅವರ ನೂತನ ಜವಾಬ್ದಾರಿಗೆ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ಬಿಜೆಪಿ ಯುವ ಮೋರ್ಚಾ ರಾಯಚೂರು ಜಿಲ್ಲಾಧ್ಯಕ್ಷ ಎನ್. ವಿನಾಯಕ ರಾವ್ ಅವರು ಸಿದ್ದು ಹೂಗಾರ್ ಅವರನ್ನು ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಹಿಸಲಾದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ನೇಮಕ ಪತ್ರದಲ್ಲಿ ತಿಳಿಸಲಾಗಿದೆ.
ಸಿದ್ದು ಹೂಗಾರ್ ಅವರನ್ನು ಅಭಿನಂದಿಸಿದ ಶಾಸಕ ಡಾ. ಶಿವರಾಜ್ ಪಾಟೀಲ ಅವರು, ಯುವಕರನ್ನು ಸಂಘಟಿಸುವ ಮೂಲಕ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನೂತನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಹೂಗಾರ್ ಸಮಾಜದ ಬಸವರಾಜ ಹೂಗಾರ್, ಬಿಜೆಪಿ ಯುವ ಮೋರ್ಚಾ ರಾಯಚೂರು ಜಿಲ್ಲಾಧ್ಯಕ್ಷ ಎನ್. ವಿನಾಯಕ ರಾವ್, ಸ್ನೇಹಿತರು, ಬಿಜೆಪಿ ಯುವ ಕಾರ್ಯಕರ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದು, ನೂತನ ಜವಾಬ್ದಾರಿ ವಹಿಸಿಕೊಂಡ ಸಿದ್ದು ಹೂಗಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.



