ಮಾನ್ವಿ: ಯುವಜನರಲ್ಲಿ ಪ್ರಜಾಪ್ರಭುತ್ವದ ಮಹತ್ವ, ವಿಧಾನಸಭೆಯ ಕಾರ್ಯವೈಖರಿ ಹಾಗೂ ಸಂಸದೀಯ ಪ್ರಕ್ರಿಯೆಗಳ ಕುರಿತು ಪ್ರಾಯೋಗಿಕ ಅರಿವು ಮೂಡಿಸುವುದೇ ಯುವ ಸಂಸತ್ತು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಉಪತಹಸೀಲ್ದಾರ್ ಅಬ್ದುಲ್ ವಾಹಿದ್ ಹೇಳಿದರು.
ಪಟ್ಟಣದ ಬಿ.ವಿ.ಆರ್. ಶಾಲೆಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಸಂಸತ್ತು ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಪಾತ್ರ, ಜನಪ್ರತಿನಿಧಿಗಳ ಜವಾಬ್ದಾರಿ, ವಿಧಾನಸಭೆಯ ಚರ್ಚೆಗಳು ಹಾಗೂ ಪ್ರಶ್ನೋತ್ತರ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಅಗತ್ಯ ಎಂದರು.
ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಂಸದೀಯ ವ್ಯವಸ್ಥೆಯನ್ನು ಕೇವಲ ಪಾಠಪುಸ್ತಕದ ಮಟ್ಟದಲ್ಲೇ ಅಲ್ಲದೆ, ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಜೊತೆಗೆ ನಾಯಕತ್ವ, ಆತ್ಮವಿಶ್ವಾಸ, ವಿಚಾರ ಮಂಡನೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಜವಾಬ್ದಾರಿಯುತವಾಗಿ ಚಿಂತಿಸುವ ಗುಣಗಳನ್ನು ಬೆಳೆಸುತ್ತವೆ ಎಂದು ಹೇಳಿದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಾಹಿರಾಬಾನು ನದಾಫ್ ಮಾತನಾಡಿ, ಸಂಸದೀಯ ಮಾದರಿ ವ್ಯವಸ್ಥೆಯ ಕಾರ್ಯವಿಧಾನ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಜವಾಬ್ದಾರಿಗಳು, ವಿಧಾನಸಭೆಯಲ್ಲಿ ಪ್ರಶ್ನೆಗಳನ್ನು ಕೇಳುವ ವಿಧಾನ ಹಾಗೂ ಶೂನ್ಯ ವೇಳೆಯಲ್ಲಿ ವಿಷಯಗಳನ್ನು ಪ್ರಸ್ತಾಪಿಸುವ ಪ್ರಕ್ರಿಯೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳು ನೈಜ ವಿಧಾನಸಭೆ ಕಲಾಪವನ್ನು ಹೋಲುವಂತೆ ಅಣಕು ಅಧಿವೇಶನ ನಡೆಸಿದರು. ಮುಖ್ಯಮಂತ್ರಿ, ಸಚಿವರು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ಪಾತ್ರ ವಹಿಸಿದ ವಿದ್ಯಾರ್ಥಿಗಳು ಪ್ರಶ್ನೋತ್ತರ, ಚರ್ಚೆ, ಪ್ರತಿಕ್ರಿಯೆ ಮತ್ತು ವಿಷಯ ಮಂಡನೆಯ ಮೂಲಕ ಕಲಾಪವನ್ನು ಜೀವಂತಗೊಳಿಸಿದರು.
ಲೋಯೋಲಾ ಕಾಲೇಜಿನ ವಿದ್ಯಾರ್ಥಿ ರಾಹುಲ್ ಮುಖ್ಯಮಂತ್ರಿ ಪಾತ್ರ ನಿರ್ವಹಿಸಿ, ವಿರೋಧ ಪಕ್ಷದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಆಡಳಿತ ಪಕ್ಷದ ಜವಾಬ್ದಾರಿಯನ್ನು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಅವಕಾಶ ದೊರೆಯಿತು. ಈ ಅನುಭವ ನಾಯಕತ್ವ ಗುಣ ಬೆಳೆಸಲು ಸಹಕಾರಿಯಾಯಿತು ಎಂದು ಅಭಿಪ್ರಾಯಪಟ್ಟರು.
ಬಾಷುಮಿಯಾ ಸಾಹುಕಾರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ರಾಗಿಣಿ ಸಭಾಪತಿ ಪಾತ್ರ ನಿರ್ವಹಿಸಿ, ಸಭೆಯನ್ನು ನಿಯಮಬದ್ಧವಾಗಿ ಮುನ್ನಡೆಸುವುದು, ಸದಸ್ಯರಿಗೆ ಮಾತನಾಡಲು ಅವಕಾಶ ಕಲ್ಪಿಸುವುದು ಹಾಗೂ ಕಲಾಪದಲ್ಲಿ ಶಿಸ್ತು ಕಾಪಾಡುವ ವಿಧಾನವನ್ನು ಕಲಿಯಲು ಸಾಧ್ಯವಾಯಿತು ಎಂದು ತಿಳಿಸಿದರು.
ಗಣೇಶ ಮಹ್ಮದಿ, ಲೋಯೋಲಾ ಕಾಲೇಜಿನ ವರುಣ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಯುವ ಸಂಸತ್ತು ಕಾರ್ಯಕ್ರಮದ ಅನುಭವ ಹಂಚಿಕೊಂಡರು.
ತಾಲೂಕು ಆಡಳಿತ, ತಾಲೂಕು ಪಂಚಾಯತ್, ಮಾನ್ವಿ ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಲೂಕಿನ ವಿವಿಧ ಸರ್ಕಾರಿ ಪ್ರೌಢಶಾಲೆಗಳು, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು, ಸಾರ್ವಜನಿಕ ಸಮಸ್ಯೆಗಳನ್ನು ಗುರುತಿಸುವುದು, ಅವುಗಳನ್ನು ಸದನದಲ್ಲಿ ಪ್ರಸ್ತಾಪಿಸುವುದು, ಪ್ರಶ್ನಿಸುವುದು, ಉತ್ತರಿಸುವುದು ಹಾಗೂ ಭಿನ್ನಾಭಿಪ್ರಾಯಗಳ ನಡುವೆಯೂ ಪ್ರಜಾಪ್ರಭುತ್ವದ ನಿಯಮಗಳನ್ನು ಗೌರವಿಸುವ ವಿಧಾನವನ್ನು ಪ್ರಾಯೋಗಿಕವಾಗಿ ಅರಿತುಕೊಂಡರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಕುಬೇರಪ್ಪ, ಮಾನ್ವಿ ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಮಹೇಶ್ ಕುಮಾರ, ವಕೀಲರಾದ ಅಮೃತ ಮತ್ತು ಶ್ರೀದೇವಿ ಬಳಿಗಾರ್, ಸಮಾಜ ಕಲ್ಯಾಣ ಇಲಾಖೆಯ ರಾಜಶೇಖರ್, ರಾಮಲಿಂಗಪ್ಪ ನಾಯಕ ಕೆ., ವಿಜಯ್, ಸುರೇಖಾ, ಮಹಿಬೂಬ್, ಇರ್ಪಾನ್, ಉಪನ್ಯಾಸಕರಾದ ಬಸವರಾಜ್ ಕಡದೊಡ್ಡಿ, ಡಾ. ಹುಲಿಯಪ್ಪ, ಡಾ. ಬಸವರಾಜ್ ಕರಡಿಗುಡ್ಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



