ರಾಯಚೂರು, ಅ.8: ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗಾಗಿ ಮಕ್ಕಳ ಜನನದ ನಡುವೆ ಸೂಕ್ತ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದ್ದು, ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಹೊಸದಾಗಿ ಪರಿಚಯಿಸಲಾಗುತ್ತಿರುವ ಚರ್ಮದಡಿಯ ಗರ್ಭನಿರೋಧಕ ಇಂಪ್ಲಾಂಟ್ ವಿಧಾನವು ಮಹಿಳೆಯರಿಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಆಯ್ಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಕುಟುಂಬ ಕಲ್ಯಾಣ ಕಾರ್ಯಕ್ರಮದ ಉಪ ನಿರ್ದೇಶಕಿ ಡಾ. ಚಂದ್ರಿಕಾ ಬಿ.ಆರ್. ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಕೃಷ್ಣಾ ಸಭಾಂಗಣದಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಗಾಗಿ ಆಯೋಜಿಸಿದ್ದ ನೂತನ ಗರ್ಭನಿರೋಧಕ ಇಂಪ್ಲಾಂಟ್ ಅಳವಡಿಕೆ ಕುರಿತ ಪುನರ್‌ಮನನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬ ಕಲ್ಯಾಣ ಯೋಜನೆಯಡಿ ಈಗಾಗಲೇ ಗರ್ಭನಿರೋಧಕ ಚುಚ್ಚುಮದ್ದು, ಪಿಪಿಐಯುಸಿಡಿ, ಛಾಯಾ ಮಾತ್ರೆ ಹಾಗೂ ಪುರುಷರಿಗೆ ನಿರೋಧ್ ಸೇರಿದಂತೆ ವಿವಿಧ ಗರ್ಭನಿರೋಧಕ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಮಹಿಳೆಯರಿಗೆ ದೀರ್ಘಕಾಲದವರೆಗೆ ಗರ್ಭಧಾರಣೆ ತಡೆಯಲು ಅನುಕೂಲವಾಗುವ ಚರ್ಮದಡಿಯ ಗರ್ಭನಿರೋಧಕ ಇಂಪ್ಲಾಂಟ್ ವಿಧಾನವನ್ನು ಪರಿಚಯಿಸಲಾಗುತ್ತಿದೆ ಎಂದು ವಿವರಿಸಿದರು.

ಬೆಂಕಿಕಡ್ಡಿಯ ಗಾತ್ರದಲ್ಲಿರುವ ಸಣ್ಣ ಹಾಗೂ ಹೊಂದಿಕೊಳ್ಳುವ ಇಂಪ್ಲಾಂಟ್ ರಾಡ್‌ ಅನ್ನು ವಿಶೇಷ ತರಬೇತಿ ಪಡೆದ ವೈದ್ಯರು ಮಹಿಳೆಯ ಮೇಲ್ತೋಳಿನ ಚರ್ಮದ ಕೆಳಭಾಗದಲ್ಲಿ ಅಳವಡಿಸುತ್ತಾರೆ. ಒಮ್ಮೆ ಅಳವಡಿಸಿದರೆ ಸುಮಾರು ಮೂರು ವರ್ಷಗಳವರೆಗೆ ಗರ್ಭಧಾರಣೆಯನ್ನು ತಡೆಯಲು ನೆರವಾಗುತ್ತದೆ. ಈ ವಿಧಾನವು ಅಂಡಾಣು ಬಿಡುಗಡೆಯನ್ನು ತಡೆಯುವುದರ ಜೊತೆಗೆ ಗರ್ಭಕಂಠದ ಲೋಳೆಯನ್ನು ದಪ್ಪವಾಗಿಸಿ ವೀರ್ಯಾಣುಗಳು ಅಂಡಾಣುವನ್ನು ತಲುಪದಂತೆ ಮಾಡುತ್ತದೆ ಎಂದು ಮಾಹಿತಿ ನೀಡಿದರು.

ಇದು ಹಾರ್ಮೋನ್ ಆಧಾರಿತ, ಹೆಚ್ಚು ಪರಿಣಾಮಕಾರಿಯಾದ ಹಾಗೂ ಅಗತ್ಯವಿದ್ದಾಗ ತೆಗೆದುಹಾಕಬಹುದಾದ ಗರ್ಭನಿರೋಧಕ ವಿಧಾನವಾಗಿದೆ. ಮಹಿಳೆಯರ ಆರೋಗ್ಯ ಸ್ಥಿತಿ ಮತ್ತು ವೈದ್ಯಕೀಯ ಸಲಹೆಗೆ ಅನುಗುಣವಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಅರ್ಹ ದಂಪತಿಗಳಿಗೆ ಕುಟುಂಬ ಯೋಜನೆಯ ಕುರಿತು ಸೂಕ್ತ ಮಾರ್ಗದರ್ಶನ ನೀಡುವುದರಿಂದ ಅನಪೇಕ್ಷಿತ ಗರ್ಭಧಾರಣೆಗಳನ್ನು ತಡೆಯಲು ಹಾಗೂ ತಾಯಿ ಮತ್ತು ಶಿಶು ಆರೋಗ್ಯವನ್ನು ಉತ್ತಮಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಶಿವಕುಮಾರ್ ನಾರಾ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ತರಬೇತಿಯಲ್ಲಿ ಭಾಗವಹಿಸಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಇಂಪ್ಲಾಂಟ್ ವಿಧಾನದ ಕುರಿತು ಸಮಗ್ರ ಮಾಹಿತಿ ಪಡೆದು ಕ್ಷೇತ್ರಮಟ್ಟದಲ್ಲಿ ಅರ್ಹ ದಂಪತಿಗಳಿಗೆ ಅರಿವು ಮೂಡಿಸಬೇಕು ಎಂದರು.

ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕುಟುಂಬ ಯೋಜನೆಯ ವಿವಿಧ ವಿಧಾನಗಳು, ಅವುಗಳ ಪ್ರಯೋಜನಗಳು ಹಾಗೂ ವೈದ್ಯಕೀಯ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡುವುದು ಅಗತ್ಯವಾಗಿದೆ. ಆರೋಗ್ಯ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಗರ್ಭನಿರೋಧಕ ಇಂಪ್ಲಾಂಟ್ ಅಳವಡಿಕೆಯ ವಿಧಾನ, ಅದರ ಕಾರ್ಯವೈಖರಿ, ಫಲಾನುಭವಿಗಳ ಆಯ್ಕೆ, ವೈದ್ಯಕೀಯ ಸುರಕ್ಷತಾ ಕ್ರಮಗಳು ಹಾಗೂ ಸೇವೆ ಒದಗಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ವೈದ್ಯರು ಮತ್ತು ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದ ಐಪಿಇ ಗ್ಲೋಬಲ್ ಲಿಮಿಟೆಡ್, ದೆಹಲಿಯ ಕಾರ್ಯಕ್ರಮ ವ್ಯವಸ್ಥಾಪಕಿ ಶೋಭನಾ ಸಿಂಗ್, ಸುರಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ, ಡಾ. ಬನದೇಶ, ಡಾ. ಶರಣಬಸವರಾಜ್, ಡಾ. ಸತೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಪುಂಡಲಿಕ ಗಂಜಿ, ಕುಟುಂಬ ಕಲ್ಯಾಣ ವಿಭಾಗದ ಅಮರೇಶ್ ಗಡ್ಡಿ, ನಾಗರಾಜ್ ಜಗತಾಪ್, ಹರೀಶ್ ಪತಂಗೆ, ರಾಜಶೇಖರ್ ಸೇರಿದಂತೆ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ತಜ್ಞ ವೈದ್ಯರು, ತಾಲೂಕು ಆರೋಗ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು, ಆರೋಗ್ಯ ಮೇಲ್ವಿಚಾರಕರು, ಸಮುದಾಯ ಆರೋಗ್ಯಾಧಿಕಾರಿಗಳು, ಆಶಾ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.