ರಾಯಚೂರು: ಅಬಕಾರಿ ಇಲಾಖೆಯ ಅಧಿಕಾರಿಗಳು ನಗರದ ಯರಮರಸ್ ಪ್ರದೇಶದಲ್ಲಿರುವ ಪೂರ್ಣಿಮಾ ಢಾಬಾ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನು ವಶಪಡಿಸಿಕೊಂಡು ಒಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ), ಕೇಂದ್ರ ಕಚೇರಿ ಬೆಳಗಾವಿ ಅವರ ಆದೇಶದಂತೆ, ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ರಾಯಚೂರು ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ, ರಾಯಚೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಅ.8ರಂದು ರಾತ್ರಿ ಸುಮಾರು 9 ಗಂಟೆಗೆ ರಾಯಚೂರು ವಲಯ ಕಚೇರಿಯ ಸಿಬ್ಬಂದಿ ಗಸ್ತಿನಲ್ಲಿದ್ದ ವೇಳೆ ದೊರೆತ ಖಚಿತ ಮಾಹಿತಿಯ ಮೇರೆಗೆ ಯರಮರಸ್ನ ಪೂರ್ಣಿಮಾ ಢಾಬಾ ಮೇಲೆ ದಾಳಿ ನಡೆಸಿದರು.
ದಾಳಿ ವೇಳೆ ಜಂಬಲದಿನ್ನಿ ಗ್ರಾಮದ ವಿಜಯ್ ತಂದೆ ನಾಗೇಂದ್ರಗೌಡ ಅವರ ಬಳಿ ಸುಮಾರು 4.320 ಲೀಟರ್ ಮದ್ಯ ಹಾಗೂ 7.8 ಲೀಟರ್ ಬಿಯರ್ ಪತ್ತೆಯಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಪತ್ತೆಯಾದ ಮದ್ಯವನ್ನು ವಶಕ್ಕೆ ಪಡೆದು ಸ್ಥಳದಲ್ಲಿಯೇ ಪಂಚನಾಮೆ ನಡೆಸಲಾಗಿದ್ದು, ಆರೋಪಿತನ ವಿರುದ್ಧ ರಾಯಚೂರು ವಲಯದ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.



