ರಾಯಚೂರು: ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ವೆಂಕಟೇಶ ಅರೋಲಿಕರ್ ಅವರನ್ನು ನೇಮಕ ಮಾಡಲಾಗಿದ್ದು, ಪಕ್ಷದ ಮುಖಂಡರ ಸಮ್ಮುಖದಲ್ಲಿ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಹನುಮಂತ ಜೂಕೂರು ಅವರು ವೆಂಕಟೇಶ ಅರೋಲಿಕರ್ ಅವರಿಗೆ ನೇಮಕಾತಿ ಆದೇಶ ಪತ್ರ ಹಸ್ತಾಂತರಿಸಿದರು.

ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಶಾಂತಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಶ್ರೀನಿವಾಸ ರೆಡ್ಡಿ, ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮಹಮ್ಮದ್ ಶಾಲಂ ಅವರ ಮಾರ್ಗದರ್ಶನದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಿತು.

ಪಕ್ಷದ ಹಿರಿಯ ಮುಖಂಡರಾದ ಜಿ. ಶಿವಮೂರ್ತಿ, ಜಯಣ್ಣ, ಜಯಂತ್ ರಾವ್ ಪತಂಗೆ, ಕೆಪಿಸಿಸಿ ವಿಭಾಗದ ರಾಜ್ಯ ಸಂಚಾಲಕ ಜಗನ್ನಾಥ ಸುಂಕಾರಿ ಹಾಗೂ ಸಮುದಾಯದ ಹಿರಿಯ ಮುಖಂಡ ತಿಮ್ಮರೆಡ್ಡಿ ಅವರ ಸಹಕಾರದೊಂದಿಗೆ ನೂತನ ಸಂಘಟನಾ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ರಾಯಚೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ವಿಶ್ವನಾಥ ಪಟ್ಟಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.