ರಾಯಚೂರು, ಅ.9: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಅಂತರ ಮಹಾವಿದ್ಯಾಲಯಗಳ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಇಳಕಲ್ನ ಶ್ರೀ ವಿಜಯ ಮಹಾಂತೇಶ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ತಂಡ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ಪಂದ್ಯಾವಳಿಯಲ್ಲಿ ವಿವಿಧ ಕಾಲೇಜುಗಳ ಏಳು ತಂಡಗಳು ಭಾಗವಹಿಸಿದ್ದು, ವಿದ್ಯಾರ್ಥಿನಿಯರು ತಮ್ಮ ಕ್ರೀಡಾ ಕೌಶಲ್ಯ ಪ್ರದರ್ಶಿಸಿದರು. ಇಳಕಲ್ನ ಶ್ರೀ ವಿಜಯ ಮಹಾಂತೇಶ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಪ್ರಥಮ ಸ್ಥಾನ, ಕಲಬುರಗಿಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಹಾಗೂ ಕಲಬುರಗಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡವು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಟೇಬಲ್ ಟೆನ್ನಿಸ್ ತಂಡದ ಆಯ್ಕೆ ಪ್ರಕ್ರಿಯೆಯೂ ನಡೆಯಿತು.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಯಚೂರಿನ ಅಲ್ ಕರೀಮ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲೆ ಹಾಗೂ ಕ್ರೀಡಾಪಟು ಸಲೀಮುನ್ನೀಸಾ ಸಲ್ಮಾ ಬೇಗಂ ಮಾತನಾಡಿ, ವಿದ್ಯಾರ್ಥಿನಿಯರು ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗದೆ ಕ್ರೀಡೆಗಳಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಿಂದ ದೈಹಿಕ ಸಾಮರ್ಥ್ಯದ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಹಾಗೂ ಸ್ಪರ್ಧಾತ್ಮಕ ಮನೋಭಾವ ವೃದ್ಧಿಯಾಗುತ್ತದೆ. ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣ ಬಸವರಾಜ ಮಾತನಾಡಿ, ಕ್ರೀಡೆಯಲ್ಲಿ ಗೆಲುವು ಮತ್ತು ಸೋಲು ಸಹಜ. ಸೋಲಿನಿಂದ ನಿರಾಶರಾಗದೆ ಮುಂದಿನ ಸ್ಪರ್ಧೆಗಳಿಗೆ ಇನ್ನಷ್ಟು ಉತ್ತಮವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಪ್ರತಿಯೊಂದು ಪಂದ್ಯಾವಳಿಯೂ ಕ್ರೀಡಾಪಟುಗಳಿಗೆ ಹೊಸ ಅನುಭವ ನೀಡುತ್ತದೆ ಎಂದು ತಿಳಿಸಿದರು. ವಿಜೇತ ತಂಡಗಳನ್ನು ಅಭಿನಂದಿಸಿದ ಅವರು, ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸಿದ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿ ಕಾರ್ಯದರ್ಶಿ ಡಾ. ಸೈಯಿದಾ ರಷೀದಾ ಪರವಿನ್, ತೀರ್ಪುಗಾರ ಹಾಗೂ ಟೇಬಲ್ ಟೆನ್ನಿಸ್ ಕ್ರೀಡಾಪಟು ಈರಣ್ಣ, ಆಯ್ಕೆ ಸಮಿತಿ ಸದಸ್ಯರಾದ ಕಲಬುರಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಜ್ಯೋತಿ ನಾಗೇಂದ್ರಪ್ಪ, ಇಳಕಲ್ನ ಎಸ್ವಿಎಂ ಮಹಿಳಾ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಗಂಗಾಧರ, ರಾಯಚೂರಿನ ಎಸ್ಎಸ್ಆರ್ಜಿ ಮಹಿಳಾ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಕಸ್ತೂರಿ ರಜಪೂತ್ ಉಪಸ್ಥಿತರಿದ್ದರು.
ಕಾಲೇಜಿನ ಸಹ ಪ್ರಾಧ್ಯಾಪಕರಾದ ಶರಣಗೌಡ ಕೆ., ಡಾ. ಸ್ವರೂಪರಾಣಿ, ಗ್ರಂಥಪಾಲಕ ಡಾ. ಸುರೇಶ ಎಸ್. ಹಾಗೂ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು. ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಡಾ. ಅಳ್ಳಪ್ಪ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ವಿಭಾಗದ ಅತಿಥಿ ಉಪನ್ಯಾಸಕ ಗುರುರಾಜ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ವಂದಿಸಿದರು. ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



