ಕವಿತಾಳ: ಪಟ್ಟಣದ ತ್ರಿಂಬಕೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಮೀಸಲಿಟ್ಟಿರುವ ಗ್ರಾಮಠಾಣಾ ಜಾಗದಲ್ಲಿ ಆಕ್ಷೇಪಣೆಗಳ ನಡುವೆಯೂ 40ಕ್ಕೂ ಹೆಚ್ಚು ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಆರೋಪಿಸಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಗಂಗಪ್ಪ ದಿನ್ನಿ ಹಾಗೂ ಕಾರ್ಯದರ್ಶಿ ಅಲ್ಲಮಪ್ರಭು ಕಲಶೆಟ್ಟಿ ಮಾತನಾಡಿ, 2014ರಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಈ ಜಾಗವನ್ನು ದೇವಸ್ಥಾನದ ಅಭಿವೃದ್ಧಿ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಟ್ಟಿತ್ತು. ಆದರೆ ಸ್ಥಳೀಯ ಶಾಸಕರ ಗಮನಕ್ಕೂ ತರದೆ, ದೇವಸ್ಥಾನ ಸಮಿತಿಯ ಆಕ್ಷೇಪಣೆಗಳನ್ನು ಪರಿಗಣಿಸದೆ ಅಧಿಕಾರಿಗಳು ಹಕ್ಕುಪತ್ರ ವಿತರಿಸಿದ್ದಾರೆ ಎಂದು ಆರೋಪಿಸಿದರು.
ಬಡವರಿಗೆ ನಿವೇಶನ ನೀಡುವುದಕ್ಕೆ ವಿರೋಧವಿಲ್ಲ. ಆದರೆ ಈಗಾಗಲೇ ನಿರ್ಗತಿಕರಿಗೆ ಬೋಸರಾಜು ಕಾಲೋನಿಯಲ್ಲಿ ಜಾಗ ನೀಡಲಾಗಿದೆ. ದೇವಸ್ಥಾನದ ಜಾಗವನ್ನು ಕೊಳಗೇರಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಸೇರಿಸಿರುವ ದಾಖಲೆಗಳನ್ನು ಬಹಿರಂಗಪಡಿಸಬೇಕು. 8 ಎಕರೆ 8 ಗುಂಟೆ ಜಾಗದ ಕುರಿತು ಸಮರ್ಪಕ ಸರ್ವೆ ನಡೆಸದೆ ಹಕ್ಕುಪತ್ರ ವಿತರಿಸಿರುವ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಜಾಗದ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಈಶಪ್ಪ ಸಾಹುಕಾರ, ರಮೇಶ ಮಿಶ್ರ, ತಿಪ್ಪಯ್ಯಸ್ವಾಮಿ, ಮಲ್ಲಿಕಾರ್ಜುನಗೌಡ, ಈರಣ್ಣ ಕೆಳಗೇರಿ, ವೆಂಕಟೇಶ ಅರಕೇರಿ, ಓನಪ್ಪ ಕಡತಲ್, ಹನುಮಂತ ಅರಕೇರಿ, ಆನಂದ, ಮೌನೇಶ ಕಟ್ಟಿಮನಿ, ಅಮರೇಶ, ಅಮರೇಶ ಭೋವಿ, ತಾಯಪ್ಪ ಯಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



