ರಾಯಚೂರು: ಲೋಕೋಪಯೋಗಿ ಇಲಾಖೆಯ ರಾಯಚೂರು ವಿಭಾಗದ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ಗಲಗ ಅವರನ್ನು ಆಡಳಿತಾತ್ಮಕ ಕಾರಣದ ನೆಪದಲ್ಲಿ ಅನಗತ್ಯವಾಗಿ ವರ್ಗಾವಣೆ ಮಾಡಲಾಗಿದ್ದು, ಸರ್ಕಾರ ಕೂಡಲೇ ವರ್ಗಾವಣೆ ಆದೇಶವನ್ನು ಹಿಂಪಡೆದು ಅವರನ್ನು ಪ್ರಸ್ತುತ ಹುದ್ದೆಯಲ್ಲಿಯೇ ಮುಂದುವರಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ವಾಲ್ಮೀಕಿ ನಾಯಕ ಸಮಾಜದ ವಿವಿಧ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ರಾಯಚೂರು ಜಿಲ್ಲೆ ಬಂದ್ಗೆ ಕರೆ ನೀಡಲಾಗುವುದು ಎಂದು ಮಹರ್ಷಿ ವಾಲ್ಮೀಕಿ ನಾಯಕರ ಮಹಾವೇದಿಕೆ (ರಿ.) ಬೆಂಗಳೂರು ಸಂಘಟನೆಯ ಕಾರ್ಯದರ್ಶಿ ಶಿವಗಣಿ ನಾಯಕ ಜಿಂಕಲ್ ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ಸೇರಿದ ಸರ್ಕಾರಿ ನೌಕರರನ್ನು ವಿವಿಧ ರೀತಿಯಲ್ಲಿ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದರು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಅನಗತ್ಯವಾಗಿ ವರ್ಗಾವಣೆ ಮಾಡುವ ಪ್ರವೃತ್ತಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೆಂಕಟೇಶ್ ಗಲಗ ಅವರ ಕಾರ್ಯದಕ್ಷತೆ, ಸೇವಾನಿಷ್ಠೆ ಹಾಗೂ ಆಡಳಿತಾತ್ಮಕ ಅನುಭವವನ್ನು ಪರಿಗಣಿಸಿ 2025ರ ಮೇ 31ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಯ ರಾಯಚೂರು ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಆದರೆ ಕೇವಲ 13 ತಿಂಗಳ ಅವಧಿಯಲ್ಲಿಯೇ ಅಕ್ಟೋಬರ್ 6ರಂದು ಆಡಳಿತಾತ್ಮಕ ಹಿತದೃಷ್ಟಿಯ ಕಾರಣ ನೀಡಿ ಮತ್ತೊಮ್ಮೆ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯನ್ನು ಅಲ್ಪಾವಧಿಯಲ್ಲಿಯೇ ವರ್ಗಾವಣೆ ಮಾಡುವ ಅಗತ್ಯವೇನಿತ್ತು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ವರ್ಗಾವಣೆ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಹಾಗೂ ಕರ್ತವ್ಯಲೋಪದ ಆರೋಪಗಳನ್ನು ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ, ಪ್ರಾಮಾಣಿಕ ಅಧಿಕಾರಿಗಳನ್ನು ಮಾತ್ರ ವರ್ಗಾವಣೆ ಮಾಡಲಾಗುತ್ತಿದೆ ಎಂದು ದೂರಿದರು.
ಅರಕೇರಾ ತಾಲೂಕು ಪಂಚಾಯಿತಿಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅಣ್ಣಾರಾವ್, ಸಿರವಾರ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹಟ್ಟಿ ಹಾಗೂ ಅರಕೇರಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಬಸವ ಅವರ ವಿರುದ್ಧ ಅಕ್ರಮಗಳ ಆರೋಪಗಳಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಈ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಜಿಲ್ಲಾ ಪಂಚಾಯಿತಿಯಲ್ಲಿ ಸುಮಾರು 10ರಿಂದ 12 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ವಾಹಿದ್ ಅವರನ್ನು ವರ್ಗಾವಣೆ ಮಾಡದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.
ಮಾನ್ವಿ ತಾಲೂಕಿನ ಪೊಲೀಸ್ ಇನ್ಸ್ಪೆಕ್ಟರ್ ಸೋಮಶೇಖರ್ ಎಸ್. ಕೆಂಚರೆಡ್ಡಿ ಅವರ ವಿರುದ್ಧವೂ ಹಲವು ಆರೋಪಗಳಿದ್ದು, ಕಳೆದ ಆಗಸ್ಟ್ನಲ್ಲಿ ಸಮವಸ್ತ್ರದಲ್ಲಿಯೇ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಕುರಿತು ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ವಿವಿಧ ಅಧಿಕಾರಿಗಳ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಕ್ರಮ ಕೈಗೊಳ್ಳದಿರುವುದಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರ ಕಾರ್ಯವೈಖರಿಯನ್ನೂ ಪ್ರಶ್ನಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಈ ಎಲ್ಲ ವಿಷಯಗಳ ಕುರಿತು ಸ್ಪಷ್ಟನೆ ನೀಡಬೇಕು. ವೆಂಕಟೇಶ್ ಗಲಗ ಅವರ ವರ್ಗಾವಣೆ ಆದೇಶವನ್ನು ಕೂಡಲೇ ಹಿಂಪಡೆಯದಿದ್ದರೆ ಜಿಲ್ಲೆಯ ಎಲ್ಲ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು. ಅಗತ್ಯವಿದ್ದರೆ ರಾಯಚೂರು ಜಿಲ್ಲೆ ಬಂದ್ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಗೌಡ, ಪಾಟೀಲ್, ಜೇಮ್ಸ್, ಅನಿಲ್ ಕುಮಾರ ಹಾಗೂ ಉದಯ ಕುಮಾರ್ ಉಪಸ್ಥಿತರಿದ್ದರು.



