ಮಂತ್ರಾಲಯ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಭಾನುವಾರ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಘಟಸ್ಥಾಪನೆ ನೆರವೇರಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು.
ಶರನ್ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ಶ್ರೀಮಠದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಶ್ರೀ ಸುಬುಧೇಂದ್ರ ತೀರ್ಥರು ಜಗನ್ಮಾತೆ ದುರ್ಗಾದೇವಿಯನ್ನು ಆರಾಧಿಸಿ ಲೋಕಕಲ್ಯಾಣ, ಸುಖಶಾಂತಿ ಹಾಗೂ ಸಮಸ್ತ ಭಕ್ತರ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀಮಠದ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಪಂಡಿತರು ಹಾಗೂ ವಿದ್ಯಾರ್ಥಿಗಳಿಂದ ಪ್ರವಚನ, ಜ್ಞಾನಕಾರ್ಯ ಮತ್ತು ವೇದಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನವರಾತ್ರಿಯ ದಿನಗಳಲ್ಲಿ ವೇದಘೋಷ, ಮಂತ್ರಪಠಣ ಹಾಗೂ ದೇವಿಯ ಆರಾಧನೆಯೊಂದಿಗೆ ಶ್ರೀಮಠದಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಲಿದೆ.
ಇದೇ ಸಂದರ್ಭದಲ್ಲಿ ಮಂತ್ರಾಲಯದ ಗ್ರಾಮದೇವತೆ ಶ್ರೀ ಮಂಚಾಲಮ್ಮ ದೇವಿಯ ಸನ್ನಿಧಿಯನ್ನು ವೀಳ್ಯದೆಲೆಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸಿದ ದೇವಿಯ ಸನ್ನಿಧಿಯು ನವರಾತ್ರಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳು ಮುಂದುವರಿಯಲಿದ್ದು, ಭಕ್ತರು ದೇವಿಯ ಅನುಗ್ರಹ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆಯಲು ಅವಕಾಶ ಕಲ್ಪಿಸಲಾಗಿದೆ.



