ರಾಯಚೂರು: ನಗರದ ಶ್ರೀ ಈಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಒಂಬತ್ತು ದಿನಗಳ ಶ್ರೀದೇವಿ ಪುರಾಣ ಪ್ರವಚನ, ವಿಶೇಷ ಪೂಜೆ ಹಾಗೂ ಮಹಿಳೆಯರು ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ.
ದೇವಸ್ಥಾನದ ಅಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪೂರ ಮತ್ತು ದೇವಸ್ಥಾನದ ಸೇವಾ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
ಪುರಾಣ ಪ್ರವಚನ ನೀಡಿದ ಲಿಂಗಸಗೂರು ತಾಲೂಕಿನ ಹಿರೇನಗನೂರು ಹಿರೇಮಠದ ಪರಮೇಶ್ವರಯ್ಯ ಶಾಸ್ತ್ರಿ, ಶ್ರೀದೇವಿ ಪುರಾಣವು ಕೇವಲ ದೇವಿಯ ಮಹಿಮೆಯನ್ನು ಸಾರುವುದಕ್ಕಷ್ಟೇ ಸೀಮಿತವಾಗಿಲ್ಲ. ಮನುಷ್ಯನಲ್ಲಿರುವ ದುರ್ಗುಣಗಳು, ದುಷ್ಟ ಆಲೋಚನೆಗಳು ಹಾಗೂ ಕೆಟ್ಟ ಪ್ರವೃತ್ತಿಗಳನ್ನು ತೊಡೆದುಹಾಕಿ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ಜೀವನ ಸಂದೇಶವನ್ನು ಒಳಗೊಂಡಿದೆ ಎಂದು ಹೇಳಿದರು.
ಮನುಷ್ಯನ ಅತಿಯಾದ ಆಸೆ, ಅಹಂಕಾರ, ಮದ, ಭ್ರಷ್ಟಾಚಾರ ಹಾಗೂ ದುರ್ಬುದ್ಧಿಗಳೇ ಆತನ ಬದುಕಿನ ನಿಜವಾದ ಶತ್ರುಗಳು. ಇಂತಹ ದುಷ್ಟ ಗುಣಗಳನ್ನು ಸಂಹರಿಸಿ ಸಾತ್ವಿಕ ಚಿಂತನೆ, ಸದಾಚಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದೇ ನವರಾತ್ರಿ ಆಚರಣೆಯ ನಿಜವಾದ ಉದ್ದೇಶವಾಗಿದೆ. ಜೀವನದಲ್ಲಿ ಆತ್ಮಗೌರವ ಕಾಪಾಡಿಕೊಳ್ಳುವುದು, ಅನಗತ್ಯ ಆಸೆಗಳಿಂದ ದೂರವಿರುವುದು ಹಾಗೂ ಸನ್ಮಾರ್ಗದಲ್ಲಿ ಸಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರವಚನದಲ್ಲಿ ವಿವರಿಸಿದರು.
ಪ್ರವಚನದ ನಂತರ ದೇವಸ್ಥಾನದ ಅರ್ಚಕ ವೇದಮೂರ್ತಿ ನಾಗಯ್ಯ ಸ್ವಾಮಿ ಹಂಚಿನಾಳ ಅವರು ಪುರಾಣ ಗ್ರಂಥಕ್ಕೆ ಮಂಗಳಾರತಿ ನೆರವೇರಿಸಿದರು.
ಬಳಿಕ ಬಡಾವಣೆ ಹಾಗೂ ಕಾಕತೀಯ ಕಾಲೋನಿಯ ಮಕ್ಕಳಿಂದ ಗಾಯನ ಮತ್ತು ನೃತ್ಯ ಕಾರ್ಯಕ್ರಮಗಳು ನಡೆದವು. ಶಬರಿಮಲೆ ಅಯ್ಯಪ್ಪ ಸ್ವಾಮಿಯ ಕಥೆಯನ್ನು ಆಧರಿಸಿದ ಇತ್ತೀಚೆಗೆ ಬಿಡುಗಡೆಯಾದ 'ಇರುಮುಡಿ' ತೆಲುಗು ಚಲನಚಿತ್ರದ ಹಾಡಿಗೆ ಕಾಕತೀಯ ಕಾಲೋನಿಯ ಮಕ್ಕಳು ಪ್ರದರ್ಶಿಸಿದ ನೃತ್ಯ ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಂಗೀತ ಕಲಾವಿದರು ಕರೋಕೆ ಹಾಡುಗಳನ್ನು ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.
ಶರನ್ನವರಾತ್ರಿ ಅಂಗವಾಗಿ ಭಕ್ತರು ಸಲ್ಲಿಸಿದ ಸೇವೆಯ ಮಹಾಪ್ರಸಾದವನ್ನು ನೂರಾರು ಸಾರ್ವಜನಿಕರು ಸ್ವೀಕರಿಸಿದರು. ಅಕ್ಟೋಬರ್ 13ರಂದು ರಾತ್ರಿ 8 ಗಂಟೆಯಿಂದ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಂದ ಅದ್ಧೂರಿ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಸೇವಾ ಸಮಿತಿ ತಿಳಿಸಿದೆ.
ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನವರಾತ್ರಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಜಗನ್ಮಾತೆಯ ಕೃಪೆಗೆ ಪಾತ್ರರಾಗುವಂತೆ ಸಮಿತಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಶಿವಯೋಗಿ ಪಾಟೀಲ, ಎಂ.ಎಂ. ಪಾಟೀಲ, ಉದಯಕುಮಾರ ಯಾಪಲದಿನ್ನಿ, ಗಿರಿಮಲ್ಲಪ್ಪಗೌಡ, ಚನ್ನಬಸವ ಇಂಜಿನಿಯರ್, ಸಂಪತಕುಮಾರ, ಜಿ. ಮಲ್ಲಿಕಾರ್ಜುನ, ವೀರೇಶಪ್ಪ ಕಲ್ಮಲ, ಭೀಮರೆಡ್ಡಿ ಪಾಟೀಲ, ಪರಮೇಶ್ವರ ಸಾಲಿಮಠ, ಪರಪ್ಪಗೌಡ ಕಲ್ಮಲ, ಬಸನಗೌಡ ಕಲ್ಲೂರ, ಆದೋನಿ ಬಸಂತ ಸೇರಿದಂತೆ ಬಡಾವಣೆಯ ನೂರಾರು ಮಹಿಳೆಯರು, ಯುವಕ-ಯುವತಿಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.



