ಕಲ್ಮಲ, ಅ.13: ಸಮುದಾಯದ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಫಿಸಿಯೋಥೆರಪಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಜಿ. ಪಾಟೀಲ್ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಲ್ಮಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರಾಯಚೂರಿನ ನವೋದಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕಲ್ಮಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.

ಕ್ಷಯರೋಗ ಹಾಗೂ ಕುಷ್ಠರೋಗದಂತಹ ಸಾಂಕ್ರಾಮಿಕ ಕಾಯಿಲೆಗಳ ನಿರ್ಮೂಲನೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ರೋಗದ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಕಾಯಿಲೆ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಎರಡು ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು, ಹಸಿವಿನ ಕೊರತೆ, ದೇಹದ ತೂಕ ಕಡಿಮೆಯಾಗುವುದು, ಸಂಜೆಯ ವೇಳೆ ಜ್ವರ, ರಾತ್ರಿ ಬೆವರುವುದು ಹಾಗೂ ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕ್ಷಯರೋಗದ ಸಂಭವನೀಯ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸದೆ ಸಮೀಪದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅದೇ ರೀತಿ, ದೇಹದ ಮೇಲೆ ಸ್ಪರ್ಶಜ್ಞಾನ ಕಡಿಮೆಯಾಗಿರುವ ತಿಳಿಬಿಳಿ ಅಥವಾ ತಾಮ್ರವರ್ಣದ ಮಚ್ಚೆಗಳು ಕಾಣಿಸಿಕೊಂಡರೆ ಕುಷ್ಠರೋಗದ ಸಾಧ್ಯತೆ ಇರುವುದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಕಾಲದಲ್ಲಿ ರೋಗ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ತಪ್ಪಿಸಬಹುದು ಎಂದು ತಿಳಿಸಿದರು.

ಎಚ್‌ಐವಿ ಸೋಂಕಿನ ಕುರಿತು ಮಾತನಾಡಿದ ಅವರು, ಇತ್ತೀಚಿನ ವರದಿಗಳ ಪ್ರಕಾರ ಸೋಂಕಿನ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡುಬರುತ್ತಿರುವುದು ಕಳವಳಕಾರಿ ವಿಷಯವಾಗಿದೆ. ವಿಶೇಷವಾಗಿ ಯುವಜನರಲ್ಲಿ ಎಚ್‌ಐವಿ ಸೋಂಕು ಹರಡುವ ವಿಧಾನಗಳು ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸದೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಶಿಬಿರದಲ್ಲಿ ನವೋದಯ ವೈದ್ಯಕೀಯ ಮಹಾವಿದ್ಯಾಲಯದ ವಿವಿಧ ವಿಭಾಗಗಳ ತಜ್ಞ ವೈದ್ಯರು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಿದರು. ಕಣ್ಣಿನ ತಪಾಸಣೆ, ದಂತ ಪರೀಕ್ಷೆ, ಮೂಳೆ ಮತ್ತು ಕೀಲು ನೋವಿನ ಸಮಸ್ಯೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಪರೀಕ್ಷಿಸಿ ಅಗತ್ಯ ಚಿಕಿತ್ಸಾ ಸಲಹೆ ನೀಡಲಾಯಿತು. ಕಲ್ಮಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು.

ಈ ಸಂದರ್ಭದಲ್ಲಿ ಫಾರ್ಮ್-ಡಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ್, ಸಮುದಾಯ ವೈದ್ಯಕೀಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಲಕ್ಷ್ಮಿ ಪಾಟೀಲ್, ದಂತ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಾಸಿ ಇಸ್ಮಾಯಿಲ್, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹಿರಿಯ ರೆಸಿಡೆಂಟ್ ವೈದ್ಯ ಡಾ. ಪವನ್ ಕುಮಾರ್, ಅಸ್ಥಿಚಿಕಿತ್ಸಾ ವಿಭಾಗದ ಹಿರಿಯ ರೆಸಿಡೆಂಟ್ ವೈದ್ಯ ಡಾ. ಸೈಯದ್, ಸಾಮಾನ್ಯ ವೈದ್ಯಕೀಯ ವಿಭಾಗದ ರೆಸಿಡೆಂಟ್ ವೈದ್ಯ ಡಾ. ಸಿದ್ಧಾರ್ಥ್ ಪಾಟೀಲ್ ಹಾಗೂ ನೇತ್ರ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಪೂರ್ವ ಡಿ. ಉಪಸ್ಥಿತರಿದ್ದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಜಗತಾಪ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭಾನುಕಾಂತ ರೆಡ್ಡಿ, ಹಿರಿಯ ಪಿಎಚ್‌ಸಿಒ ರೇಣುಕಾ, ಫಾರ್ಮಸಿ ಅಧಿಕಾರಿ ಶಖೀಲ್ ಅಹ್ಮದ್, ಹಿರಿಯ ಎಲ್‌ಟಿಒ ಬಸೀರ್, ಪಿಎಚ್‌ಸಿಒ ಪ್ರೇಮಾವತಿ, ಎಚ್‌ಐಒ ದೇವರಾಜ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.