ಸಿರವಾರ: ಚಿತ್ರದುರ್ಗದ ವೀರ ಮದಕರಿ ನಾಯಕರ ಶೌರ್ಯ, ಸಾಹಸ, ನಾಯಕತ್ವ ಹಾಗೂ ನಾಡಿನ ರಕ್ಷಣೆಗೆ ಅವರು ನೀಡಿದ ಕೊಡುಗೆಗಳು ಇಂದಿನ ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚನ್ನಪ್ಪ ಗಡ್ಲ ಕರೆ ನೀಡಿದರು.

ಪಟ್ಟಣದ ವೀರ ಮದಕರಿ ನಾಯಕ ವೃತ್ತದಲ್ಲಿ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಮದಕರಿ ನಾಯಕರ ಪ್ರತಿಮೆಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಚಿತ್ರದುರ್ಗ ಸಂಸ್ಥಾನದ ಇತಿಹಾಸದಲ್ಲಿ ವೀರ ಮದಕರಿ ನಾಯಕರು ತಮ್ಮ ಶೌರ್ಯ, ಧೈರ್ಯ ಹಾಗೂ ಆಡಳಿತ ವೈಖರಿಯಿಂದ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಏಳು ಸುತ್ತಿನ ಕೋಟೆಯನ್ನು ಹೊಂದಿರುವ ಚಿತ್ರದುರ್ಗದ ರಕ್ಷಣೆಯಲ್ಲಿ ನಾಯಕ ಅರಸರ ಪಾತ್ರ ಮಹತ್ವದ್ದಾಗಿದೆ. ನಾಡು, ನುಡಿ ಹಾಗೂ ಜನರ ರಕ್ಷಣೆಗಾಗಿ ಹೋರಾಡಿದ ಮದಕರಿ ನಾಯಕರ ಸಾಹಸಗಾಥೆ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಹೇಳಿದರು.

ಮದಕರಿ ನಾಯಕರ ನಾಯಕತ್ವದ ಗುಣಗಳು, ಸ್ವಾಭಿಮಾನ, ನಿಷ್ಠೆ ಹಾಗೂ ಹೋರಾಟದ ಮನೋಭಾವ ಎಲ್ಲರಿಗೂ ಮಾದರಿಯಾಗಿವೆ. ಯುವಜನರು ಇಂತಹ ಮಹನೀಯರ ಇತಿಹಾಸವನ್ನು ತಿಳಿದುಕೊಂಡು ಅವರ ಆದರ್ಶಗಳನ್ನು ಅನುಸರಿಸಬೇಕು. ಜಯಂತಿ ಆಚರಣೆಗಳು ಕೇವಲ ಪೂಜೆ ಮತ್ತು ಮಾಲಾರ್ಪಣೆಗೆ ಸೀಮಿತವಾಗದೆ, ಮಹನೀಯರ ಜೀವನ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವ ವೇದಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸೂರಿ ದುರಗಣ್ಣ ನಾಯಕ, ಅಜಿತಕುಮಾರ ಹೊನ್ನಟಗಿ, ಚಿನ್ನಾನ್ ನಾಗರಾಜ ನಾಯಕ, ರಂಗನಾಥ ನಾಯಕ, ಡಾ. ಯಲ್ಲಪ್ಪ, ಚಿನ್ನಾನ್ ಯಲ್ಲಪ್ಪ ದೊರೆ, ನಾಗರಾಜ ನಾಯಕ ಕೊಲ್ಮಿ, ಮಲ್ಲಿಕಾರ್ಜುನ, ಅಂಬು ನಾಯಕ, ಗೋಪಾಲ್ ನಾಯಕ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.