ರಾಯಚೂರು: ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ನೂತನ ಪದಾಧಿಕಾರಿಗಳ ನೇಮಕದಲ್ಲಿ ಸಂಘದ ನಿಯಮಗಳನ್ನು ಪಾಲಿಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಪಿಸಿರುವ ಸಮಾಜದ ಮುಖಂಡ ಜಂಬಣ್ಣ ಯಕ್ಲಾಸಪುರ, ಪ್ರಸ್ತುತ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸಿ 2027ರಿಂದ 2030ರ ಅವಧಿಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆ ನಡೆಸುವ ಮೂಲಕ ಹೊಸ ಆಡಳಿತ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 27ರಂದು ಸಮಾಜದ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ಮುಂದಿನ ಅವಧಿಯ ಆಡಳಿತ ಮಂಡಳಿಯನ್ನು ಸದಸ್ಯರ ಮತದಾನದ ಮೂಲಕ ಆಯ್ಕೆ ಮಾಡುವ ಬಗ್ಗೆ ಬಹುತೇಕ ಸದಸ್ಯರು ಸಹಮತ ವ್ಯಕ್ತಪಡಿಸಿದ್ದರು. ಆದರೂ ಸಭೆಯ ಅಭಿಪ್ರಾಯವನ್ನು ಕಡೆಗಣಿಸಿ, ಹಾಲಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯೊಂದಿಗೆ ಸಮಾಲೋಚನೆ ನಡೆಸದೆ ಕೆಲವರು ಯು. ಆಂಜಿನೇಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಬಿ. ವಿರುಪಾಕ್ಷಿ ಅವರನ್ನು ಗೌರವಾಧ್ಯಕ್ಷರನ್ನಾಗಿ ಘೋಷಿಸಿದ್ದಾರೆ ಎಂದು ದೂರಿದರು.
ಸಮಾಜದ ಆಡಳಿತಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಎಲ್ಲ ಸದಸ್ಯರ ವಿಶ್ವಾಸ ಪಡೆದು ಕೈಗೊಳ್ಳಬೇಕು. ಆದರೆ, ಸದಸ್ಯರಿಗೆ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶ ನೀಡದೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದು ಸಂಘದ ನಿಯಮಗಳಿಗೆ ವಿರುದ್ಧವಾಗಿದೆ. ಇದರಿಂದ ಸಮಾಜದ ಸದಸ್ಯರಲ್ಲಿ ಅಸಮಾಧಾನ ಉಂಟಾಗಿದೆ ಎಂದು ತಿಳಿಸಿದರು.
ಈ ಬೆಳವಣಿಗೆ ಕುರಿತು ಸೆಪ್ಟೆಂಬರ್ 30ರಂದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ಲಿಖಿತ ದೂರು ನೀಡಲಾಗಿದೆ. ಅಕ್ಟೋಬರ್ 5ರಂದು ಸಾಮಾನ್ಯ ಸಭೆಯ ನಡಾವಳಿ, ಕೈಗೊಂಡ ನಿರ್ಣಯಗಳು ಹಾಗೂ ಆಜೀವ ಸದಸ್ಯರ ಪಟ್ಟಿಯನ್ನು ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅಕ್ಟೋಬರ್ 13ರಂದು ಮತ್ತೊಮ್ಮೆ ಮನವಿ ಸಲ್ಲಿಸಿ ಚುನಾವಣೆ ಮೂಲಕ ಆಡಳಿತ ಮಂಡಳಿ ರಚಿಸಲು ಕೋರಿದ್ದರೂ ಇದುವರೆಗೆ ಸೂಕ್ತ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅಕ್ಟೋಬರ್ 15ರಂದು ಸಮಾಜದ ರಾಜ್ಯಾಧ್ಯಕ್ಷ ಹಾಗೂ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಪ್ಪ ಸಿ. ಅವರ ಜನ್ಮದಿನದ ಪ್ರಯುಕ್ತ ಸಮುದಾಯ ಭವನದಲ್ಲಿ ಕುಕ್ಕರ್, ಬೆಡ್ಶೀಟ್, ನೋಟ್ಬುಕ್ ಸೇರಿದಂತೆ ವಿವಿಧ ವಸ್ತುಗಳನ್ನು ಉಚಿತವಾಗಿ ಹಂಚಿಕೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಉಚಿತ ಸಾಮಗ್ರಿಗಳ ವಿತರಣೆಯಂತಹ ಕಾರ್ಯಕ್ರಮಗಳು ಚುನಾವಣಾ ನಿಯಮಗಳಿಗೆ ವಿರುದ್ಧವಾಗುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ಚುನಾವಣಾ ಅಧಿಕಾರಿಗಳು ಕಾರ್ಯಕ್ರಮದ ಉದ್ದೇಶ ಮತ್ತು ಸ್ವರೂಪವನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಸಮಾಜದ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಲು ನಿಯಮಾನುಸಾರ ಚುನಾವಣೆ ನಡೆಸಬೇಕು. ಅಲ್ಲದೆ, ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಉದ್ದೇಶಿತ ಸಾಮಗ್ರಿ ವಿತರಣಾ ಕಾರ್ಯಕ್ರಮವನ್ನು ರದ್ದುಗೊಳಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎ. ಶಾಂತಪ್ಪ, ಹುಲಿಗೆಪ್ಪ, ಮಂಜುಳಾ, ಲಕ್ಷ್ಮಣ್ ಸೇರಿದಂತೆ ಸಮಾಜದ ಇತರ ಮುಖಂಡರು ಉಪಸ್ಥಿತರಿದ್ದರು.



