ಸಿರವಾರ, ಅ.14: ಬಾಲ್ಯವಿವಾಹವು ಹೆಣ್ಣುಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೆಣ್ಣುಮಕ್ಕಳಿಗೆ ಮದುವೆ ಮಾಡುವಾಗ ಕನಿಷ್ಠ 18 ವರ್ಷ ವಯಸ್ಸು ಪೂರ್ಣಗೊಂಡಿರುವುದು ಅತ್ಯಂತ ಮುಖ್ಯವಾಗಿದ್ದು, ಪೋಷಕರು ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುನೀಲ್ ಸರೋದೆ ತಿಳಿಸಿದರು.
ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಜಾನಾಪುರ ಕ್ಯಾಂಪ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಜನಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ತಾಯಂದಿರೊಂದಿಗೆ ಮಾತನಾಡಿದ ಅವರು, ಬಾಲ್ಯವಿವಾಹದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಕುಟುಂಬ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಬಾಲ್ಯದಿಂದ ಹದಿಹರೆಯಕ್ಕೆ ಕಾಲಿಡುವ ಹಂತದಲ್ಲಿಯೇ ಮದುವೆ ಮಾಡುವುದು ಹಾಗೂ ಚಿಕ್ಕ ವಯಸ್ಸಿನಲ್ಲಿ ಗರ್ಭಧರಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅಪಾಯ ಎದುರಾಗಬಹುದು. ರಕ್ತಹೀನತೆ, ಅಧಿಕ ರಕ್ತದೊತ್ತಡ, ಅಪೂರ್ಣ ದೈಹಿಕ ಬೆಳವಣಿಗೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಹೆರಿಗೆ ಸಂದರ್ಭದಲ್ಲಿ ತೊಂದರೆಗಳು ಉಂಟಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಅಗತ್ಯ ಎದುರಾಗಬಹುದು. ಅಲ್ಲದೆ ಕಡಿಮೆ ತೂಕದ ಮಗು ಜನಿಸುವುದು ಹಾಗೂ ಮಗುವಿನ ಬೆಳವಣಿಗೆಯಲ್ಲಿ ಕುಂಠಿತ ಉಂಟಾಗುವ ಅಪಾಯವಿದೆ ಎಂದು ವಿವರಿಸಿದರು.
ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಎರಡು ಮಕ್ಕಳ ಜನನದ ನಡುವೆ ಕನಿಷ್ಠ ಮೂರು ವರ್ಷಗಳ ಅಂತರ ಕಾಯ್ದುಕೊಳ್ಳುವುದು ಉತ್ತಮ. ಇದರಿಂದ ತಾಯಿಯ ದೇಹವು ಚೇತರಿಸಿಕೊಳ್ಳಲು ಹಾಗೂ ಮೊದಲ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅನುಕೂಲವಾಗುತ್ತದೆ. ಕುಟುಂಬ ಯೋಜನೆ ಕುರಿತು ದಂಪತಿಗಳು ಸೂಕ್ತ ಅರಿವು ಹೊಂದಿ ಆರೋಗ್ಯಕರ ಕುಟುಂಬ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕುಟುಂಬ ಕಲ್ಯಾಣ ಯೋಜನೆಯಡಿ ವಿವಿಧ ಗರ್ಭನಿರೋಧಕ ವಿಧಾನಗಳು ಉಚಿತವಾಗಿ ಲಭ್ಯವಿವೆ. ಮಹಿಳೆಯರಿಗೆ ಕಾಪರ್-ಟಿ, ಮಾಲಾ-ಎನ್ ಮಾತ್ರೆಗಳು, ಛಾಯಾ ಮಾತ್ರೆಗಳು ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಪಡೆಯಬಹುದಾದ ಗರ್ಭನಿರೋಧಕ ಚುಚ್ಚುಮದ್ದು ಲಭ್ಯವಿದೆ. ಪುರುಷರಿಗೆ ಕಾಂಡೋಮ್ಗಳ ವ್ಯವಸ್ಥೆಯಿದ್ದು, ಇವುಗಳ ಬಳಕೆಯಿಂದ ಮಕ್ಕಳ ಜನನದ ನಡುವೆ ಅಗತ್ಯ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇನ್ನು ಮುಂದೆ ಮಕ್ಕಳನ್ನು ಹೊಂದಲು ಇಚ್ಛಿಸದ ದಂಪತಿಗಳಿಗೆ ಶಾಶ್ವತ ಕುಟುಂಬ ಯೋಜನಾ ವಿಧಾನಗಳೂ ಲಭ್ಯವಿವೆ. ಮಹಿಳೆಯರಿಗೆ ಲ್ಯಾಪರೊಸ್ಕೋಪಿಕ್ ಸಂತಾನಹರಣ ಹಾಗೂ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ಮತ್ತು ಪುರುಷರಿಗೆ ನೋ-ಸ್ಕಾಲ್ಪೆಲ್ ವ್ಯಾಸೆಕ್ಟಮಿ (ಎನ್ಎಸ್ವಿ) ಸೌಲಭ್ಯಗಳಿವೆ. ದಂಪತಿಗಳು ಆರೋಗ್ಯ ಸಿಬ್ಬಂದಿಯ ಸಲಹೆ ಪಡೆದು ತಮಗೆ ಸೂಕ್ತವಾದ ಕುಟುಂಬ ಕಲ್ಯಾಣ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬಾಲ್ಯವಿವಾಹ ತಡೆಗಟ್ಟುವುದು ಕೇವಲ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲ. ಪೋಷಕರು, ಗ್ರಾಮಸ್ಥರು ಹಾಗೂ ಸಮುದಾಯದ ಪ್ರತಿಯೊಬ್ಬರೂ ಈ ಬಗ್ಗೆ ಜಾಗೃತರಾಗಬೇಕು. ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಬಾಲ್ಯವಿವಾಹ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮಾರೆಡ್ಡಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಚಿತ್ರಾ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಸೇರಿದಂತೆ ಗ್ರಾಮಸ್ಥರು ಹಾಗೂ ತಾಯಂದಿರು ಉಪಸ್ಥಿತರಿದ್ದರು.



