ಮಾನ್ವಿ: ಮನುಷ್ಯನ ಹುಟ್ಟು ಮತ್ತು ಸಾವಿನ ನಡುವಿನ ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳಲು ಧಾರ್ಮಿಕ ಚಿಂತನೆ, ಆಧ್ಯಾತ್ಮಿಕ ಜ್ಞಾನ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಪುರಾಣ ಪ್ರವಚನಗಳನ್ನು ಕೇವಲ ಆಲಿಸುವುದಕ್ಕೆ ಸೀಮಿತಗೊಳಿಸದೆ, ಅವುಗಳಲ್ಲಿನ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅನುಸರಿಸಿದಾಗ ಬದುಕು ಸುಂದರವಾಗುತ್ತದೆ ಎಂದು ನಂದವಾಡಗಿ ಆಳಂದ ಜಾಲವಾದಿಯ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಕರೆಗುಡ್ಡ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕರೆಗುಡ್ಡ ಶ್ರೀಮಠವು ಈ ಭಾಗದ ಪ್ರಮುಖ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಅಂಬಾದೇವಿಯ ಆರಾಧನೆಯಿಂದ ಭಕ್ತರ ನಂಬಿಕೆಯ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿ ಅಂಬಾದೇವಿಯ ಮಹಿಮೆಗೆ ಸಂಬಂಧಿಸಿದ ಅನೇಕ ವಿಶೇಷತೆಗಳಿವೆ ಎಂಬ ನಂಬಿಕೆ ಭಕ್ತರಲ್ಲಿದೆ. ಸಾಮಾನ್ಯವಾಗಿ ಅಡುಗೆ ಮಾಡುವಾಗ ಹೊಗೆ ಮತ್ತು ವಾಸನೆ ಸುತ್ತಮುತ್ತ ಹರಡುತ್ತದೆ. ಆದರೆ ಈ ಕ್ಷೇತ್ರದಲ್ಲಿ ಅಂತಹ ಅನುಭವವಾಗುವುದಿಲ್ಲ ಎಂಬುದು ಭಕ್ತರ ನಂಬಿಕೆಯಾಗಿದ್ದು, ಇದನ್ನು ದೇವಿಯ ಮಹಿಮೆಯಾಗಿ ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದರು.

ನಂದವಾಡಗಿ ಆಳಂದ ಜಾಲವಾದಿಯ ಷ. ಬ್ರ. ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಆಧ್ಯಾತ್ಮಿಕ ಚಿಂತನೆಯಿಂದ ಮನುಷ್ಯನ ಮನಸ್ಸು ಪರಿಶುದ್ಧಗೊಳ್ಳುತ್ತದೆ. ಪುರಾಣಗಳು ಧರ್ಮದ ಮಹತ್ವವನ್ನು ತಿಳಿಸುವುದರ ಜೊತೆಗೆ ಜೀವನದಲ್ಲಿ ಅನುಸರಿಸಬೇಕಾದ ನೀತಿ, ನಡವಳಿಕೆ ಮತ್ತು ಆದರ್ಶಗಳನ್ನು ಬೋಧಿಸುತ್ತವೆ. ಪ್ರತಿಯೊಬ್ಬರೂ ಪುರಾಣ ಪ್ರವಚನಗಳನ್ನು ಆಲಿಸಿ ಅವುಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಲೌಕಿಕ ಸುಖಭೋಗಗಳನ್ನು ತ್ಯಜಿಸಿ ಆಧ್ಯಾತ್ಮಿಕ ಸಾಧನೆಯ ಮೂಲಕ ಉನ್ನತ ಬದುಕನ್ನು ಕಟ್ಟಿಕೊಂಡ ಅಕ್ಕಮಹಾದೇವಿಯ ಜೀವನ ಎಲ್ಲರಿಗೂ ಆದರ್ಶವಾಗಿದೆ. ಅವರ ತ್ಯಾಗ, ಭಕ್ತಿ ಮತ್ತು ಆತ್ಮಜ್ಞಾನದ ಸಂದೇಶವನ್ನು ಇಂದಿನ ಸಮಾಜ ಅರಿತುಕೊಳ್ಳಬೇಕಿದೆ. ಧಾರ್ಮಿಕ ಪ್ರವಚನಗಳು ಜನರಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಸಂತೆಕೆಲೂರಿನ ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯ ತನ್ನ ಬದುಕಿನಲ್ಲಿ ಪ್ರೀತಿ, ಕರುಣೆ, ಸಹಬಾಳ್ವೆ ಹಾಗೂ ಪರೋಪಕಾರದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇತರರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

ರೈತರ ಸಂಕಷ್ಟದ ಕುರಿತು ಪ್ರಸ್ತಾಪಿಸಿದ ಅವರು, ನೀರಾವರಿ ಸೌಲಭ್ಯಗಳಿರುವ ಪ್ರದೇಶಗಳಲ್ಲಿಯೂ ಸಮರ್ಪಕ ನೀರು ದೊರೆಯದೆ ರೈತರು ತೊಂದರೆ ಅನುಭವಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಹೊಲಗಳಿಗೆ ನೀರು ಹರಿಯಬೇಕಾದ ಸಂದರ್ಭದಲ್ಲಿ ರೈತರ ಕಣ್ಣಲ್ಲಿ ಕಣ್ಣೀರು ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಅನ್ನದಾತರಾದ ರೈತರ ಬದುಕು ಸುಧಾರಿಸಬೇಕು. ಕೃಷಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿ ರೈತ ಕುಟುಂಬಗಳಲ್ಲಿ ನೆಮ್ಮದಿ ನೆಲೆಸಲಿ ಎಂದು ಆಶಿಸಿದರು.

ಮನುಷ್ಯನಲ್ಲಿರುವ ಅಹಂಕಾರವೇ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. 'ನಾನು' ಎಂಬ ಸ್ವಾರ್ಥದ ಮನೋಭಾವವನ್ನು ಬಿಟ್ಟು 'ನೀನು' ಎಂಬ ಪ್ರೀತಿ ಮತ್ತು ಗೌರವದ ಭಾವನೆ ಬೆಳೆಸಿಕೊಂಡಾಗ ಸಂಬಂಧಗಳು ಗಟ್ಟಿಯಾಗುತ್ತವೆ. ಕುಟುಂಬ ಹಾಗೂ ಸಮಾಜದಲ್ಲಿ ಪರಸ್ಪರ ವಿಶ್ವಾಸ, ಸಹಕಾರ ಮತ್ತು ಹೊಂದಾಣಿಕೆ ಇದ್ದಾಗ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಾನಯೋಗಿ, ಶಿವಯೋಗಿ ಪದ್ಮಭೂಷಣ ಡಾ. ಪಂಡಿತ್ ಪುಟ್ಟರಾಜ ಗುರುವರ್ಯರ ಶಿಷ್ಯತ್ರಯರಲ್ಲಿ ಒಬ್ಬರಾದ ನಂದವಾಡಗಿಯ ವೇ. ಮೂ. ಮಹಾಂತೇಶ ಶಾಸ್ತ್ರಿಗಳು ಶ್ರೀದೇವಿ ಪುರಾಣ ಪ್ರವಚನ ನೀಡುತ್ತಿದ್ದಾರೆ. ಕರೆಗುಡ್ಡದ ಗಾನಕೋಗಿಲೆ ಅಮರೇಶ ಗವಾಯಿ ಸಾಲಿಮಠ ಪುರಾಣ ಪಠಣ ಮಾಡುತ್ತಿದ್ದು, ನಾಗಡದಿನ್ನಿಯ ಬಸವರಾಜಯ್ಯ ಹಿರೇಮಠ ತಬಲಾ ವಾದನದ ಮೂಲಕ ಸಂಗೀತ ಸಾಥ್ ನೀಡುತ್ತಿದ್ದಾರೆ. ಭಕ್ತಿ ಸಂಗೀತದೊಂದಿಗೆ ನಡೆಯುತ್ತಿರುವ ಪುರಾಣ ಕಾರ್ಯಕ್ರಮ ಭಕ್ತರ ಗಮನ ಸೆಳೆಯುತ್ತಿದೆ.

ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 24ರಂದು ಸಂಜೆ 5 ಗಂಟೆಗೆ ವಿವಿಧ ವಾದ್ಯಮೇಳಗಳೊಂದಿಗೆ ಸುಮಂಗಲಿಯರ ಸಮ್ಮುಖದಲ್ಲಿ ಶ್ರೀಮಠದ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕರೆಗುಡ್ಡ ಶ್ರೀಮಠದ ಪೀಠಾಧಿಪತಿ ಷ. ಬ್ರ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮನವಿ ಮಾಡಿದರು.