ರಾಯಚೂರು ಅ. 15 (ಕರ್ನಾಟಕ ವಾರ್ತೆ): ಅಡುಗೆ ಕೋಣೆ ಮತ್ತು ಆಹಾರದ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಬೆಳೆಯುವ ಮಕ್ಕಳಿಗೆ ಸಮತೋಲಿತ ಮತ್ತು ರುಚಿಕರವಾದ ಒಳ್ಳೆಯ ಆಹಾರ ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಅವರು ಹೇಳಿದರು.
ಅಕ್ಟೋಬರ್ 15ರ ಗುರುವಾರದಂದು ರಾಯಚೂರು ನಗರದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಕ್ರೈಸ್ ವಸತಿ ಶಾಲೆಯ ಅಧೀನದಲ್ಲಿರುವ ಖಾಯಂ / ಹೊರಸಂಪನ್ಮೂಲ ಡಿ-ಗ್ರೂಪ್ ಸಿಬ್ಬಂದಿಗಳಿಗೆ ಅಡುಗೆ ತಯಾರಿಸುವ ಮತ್ತು ಸ್ವಚ್ಛತೆಯನ್ನು ಕಾಪಾಡುವ ಕುರಿತು ಮೂರು ದಿನಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರಕಾರ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ದಿನಸಿ, ಸೋಪು, ಪೇಸ್ಟ್, ಅಡುಗೆ ಅನಿಲ ಸೇರಿ ಅಗತ್ಯ ಸೌಲಭ್ಯಗಳನ್ನು ನೀಡುತ್ತದೆ. ಸಿಬ್ಬಂದಿ ಶುಚಿ, ರುಚಿಯಾದ ಅಡುಗೆ ತಯಾರಿಸಿ ವಿದ್ಯಾರ್ಥಿಗಳೊಂದಿಗೆ ತಾವು ಅವರ ಪೋಷಕರಂತೆ ಹೊಂದಾಣಿಕೆ ಮಾಡಿಕೊಂಡು ಅವರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕು ಎಂದರು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಸುಮಾರು ಶೇ. 40ರಷ್ಟಿದ್ದು, ಜಿಲ್ಲೆಯಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆಯಂತಹ (ಅನೀಮಿಯಾ) ಸಮಸ್ಯೆಗಳು ಇನ್ನೂ ಉಳಿದಿದ್ದು, ಇವುಗಳನ್ನು ಹೋಗಲಾಡಿಸಲು ಶಿಕ್ಷಣದ ಜೊತೆಗೆ ಶಾಲೆ, ಅಂಗನವಾಡಿ, ವಸತಿ ನಿಲಯ ಹಾಗೂ ವಸತಿ ಶಾಲೆಗಳ ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಆರೋಗ್ಯ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಕಲ್ಪಿಸುವ ಉದ್ದೇಶದಿಂದ, ಸರ್ಕಾರಿ ಸಂಸ್ಥೆಗಳಾದ ಶಾಲೆ, ಅಂಗನವಾಡಿ ಮತ್ತು ವಸತಿ ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದರು.
ಶಿಕ್ಷಣವು ಕೇವಲ ಮೂಲಭೂತ ಅವಶ್ಯಕತೆಯಾಗಿರದೆ, ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು. ಹಾಗೂ ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಶಾಲೆಗೆ ಹಾಜರಾಗಿ ಉತ್ತಮ ಶಿಕ್ಷಣ ಪಡೆಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಲವು ತಿಂಗಳಿಂದ ಜಿಲ್ಲೆಯ ಕೆಲವು ವಸತಿ ಶಾಲೆಗಳು ಮತ್ತು ಹಾಸ್ಟೆಲ್ಗಳಲ್ಲಿ ಆಹಾರ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಅಧಿಕಾರಿಗಳು, ಶಾಲಾ ಮುಖ್ಯಸ್ಥರು ಮತ್ತು ವಾರ್ಡನ್ಗಳು ಹೆಚ್ಚಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ನಂದಿತಾ ಎಂ.ಎನ್. ಅವರು ಮಾತನಾಡಿ, ಜಿಲ್ಲೆಯಲ್ಲಿ ಹೊಸತನದ ಹಾಗೂ ನಾವೀನ್ಯತೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಡುಗೆ ಸಿಬ್ಬಂದಿಗಳು ಮಕ್ಕಳಿಗೆ ಪ್ರೀತಿಯಿಂದ ಊಟ ಬಡಿಸುತ್ತಾ ಅವರೊಂದಿಗೆ ಬೆರೆತು ಮಾತನಾಡುವುದು ಅತ್ಯಗತ್ಯ ಎಂದರು.
ಮಕ್ಕಳು ಮನೆಯನ್ನು ಬಿಟ್ಟು ದೂರವಿರುವುದರಿಂದ ಕೆಲವೊಮ್ಮೆ ಖಿನ್ನತೆಗೆ ಒಳಗಾಗುತ್ತಾರೆ. ಅಡುಗೆ ಸಿಬ್ಬಂದಿಗಳು ಅವರೊಂದಿಗೆ ಸಮಯ ಕಳೆದು, ಅವರ ಭಾವನೆಗಳಿಗೆ ಸ್ಪಂದಿಸುವುದರಿಂದ ಮಕ್ಕಳಲ್ಲಿರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ಇದಕ್ಕೂ ಮುಂಚೆ ಪ್ರಾಸ್ತಾವಿಕವಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರ ಅವರು ಮಾತನಾಡಿ, ವಿದ್ಯಾರ್ಥಿ ನಿಲಯಗಳಲ್ಲಿ (ಹಾಸ್ಟೆಲ್) ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡುವುದು ಮತ್ತು ರುಚಿಕರವಾದ, ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುವುದು ನಮ್ಮೆಲ್ಲರ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದರು.
ವಿದ್ಯಾರ್ಥಿ ನಿಲಯಗಳ ಅಚ್ಚುಕಟ್ಟು ನಿರ್ವಹಣೆಗೆ ವಾರ್ಡನ್ಗಳು, ಮುಖ್ಯ ಅಡುಗೆಯವರು, ಅಡುಗೆಯವರು, ಸಹಾಯಕರು ಹಾಗೂ ಸ್ವಚ್ಛತಾ ಸಿಬ್ಬಂದಿ ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು. ಪ್ರಸ್ತುತ ಇತರ ನಿಲಯಗಳಿಗೆ ಹೋಲಿಸಿದರೆ ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿದ್ದು, ಎಲ್ಲರಿಗೂ ಉತ್ತಮ ಸೌಲಭ್ಯ ಕಲ್ಪಿಸಬೇಕು ಎಂದರು.
ಹಿಂದಿನ ಕಾಲದಲ್ಲಿ ಸೌಲಭ್ಯಗಳ ಕೊರತೆಗಳಿದ್ದರೂ ತಾಯಂದಿರು ಅಷ್ಟು ಪ್ರೀತಿಯಿಂದ ಅಡುಗೆ ಮಾಡಿ ಹಾಕುತ್ತಿದ್ದರು. ಅದೇ ರೀತಿಯ ಪ್ರೀತಿ ಮತ್ತು ಕಾಳಜಿಯನ್ನು ಇಂದಿನ ಸಿಬ್ಬಂದಿ ಕೂಡ ವಿದ್ಯಾರ್ಥಿಗಳ ಮೇಲೆ ತೋರಬೇಕು. ನಿಲಯಗಳಲ್ಲಿ ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ, ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.
ಇದಕ್ಕೂ ಮುಂಚೆ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ವಿವಿಧ ಗಣ್ಯರಿಂದ ಮಾಲಾರ್ಪಣೆ ಮಾಡಿ, ಸಂವಿಧಾನ ಪೀಠಿಕೆಯನ್ನು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ ಅವರು ಬೋಧಿಸಿದರು.
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ, ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರವಿ ಸೇರಿದಂತೆ ವಿವಿಧ ವಸತಿ ಶಾಲೆಯ ಪ್ರಾಂಶುಪಾಲರು, ನಿಲಯ ಪಾಲಕರು, ಅಡುಗೆ ಸಿಬ್ಬಂದಿಗಳು, ಸಹಾಯಕರು ಇದ್ದರು.



