ರಾಯಚೂರು: ನಗರದ ಬೃಹಸ್ಪತಿವಾರಪೇಟೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳೆದಿರುವ ಓಂಕಾರ ರೂಪದ ಬನ್ನಿ ಮಂಟಪವು ಭಕ್ತರ ಗಮನ ಸೆಳೆಯುತ್ತಿದ್ದು, ಇದರ ದರ್ಶನಕ್ಕಾಗಿ ಪ್ರತಿನಿತ್ಯ ನೂರಾರು ಮಹಿಳೆಯರು ಹಾಗೂ ಪುರುಷರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.

ಶರನ್ನವರಾತ್ರಿ ಮಹೋತ್ಸವದ ಆರನೇ ದಿನದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಈ ಸಂದರ್ಭದಲ್ಲಿ ಮಹಿಳೆಯರು ನಾಡಿನ ಸಮೃದ್ಧಿ, ಹಸಿರು ಹಾಗೂ ಅಭಿವೃದ್ಧಿಯ ಸಂಕೇತವಾಗಿ ಹಸಿರು ಬಣ್ಣದ ಉಡುಪುಗಳನ್ನು ಧರಿಸಿ, ಜಗನ್ಮಾತೆ ಅಂಬಾಭವಾನಿಗೆ ಹಸಿರು ಆರತಿ ಬೆಳಗುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.

ಮಳೆಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಬದುಕು ಹಸನಾಗಲಿ, ಉತ್ತಮ ಮಳೆಯಾಗಿ ನಾಡಿನೆಲ್ಲೆಡೆ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಎಂದು ಮಹಿಳೆಯರು ದೇವಿಯಲ್ಲಿ ಪ್ರಾರ್ಥಿಸಿದರು.

ಮುಂಗಾರಿನಲ್ಲಿ ಸಮರ್ಪಕ ಮಳೆಯಾಗದೆ ರೈತರು ಬೆಳೆದ ಬೆಳೆಗಳು ಒಣಗುತ್ತಿದ್ದು, ರೈತರು ಆಕಾಶದತ್ತ ಮುಖಮಾಡಿ ಮಳೆಗಾಗಿ ಕಾಯುವಂತಾಗಿದೆ. ಹಿಂಗಾರು ಹಂಗಾಮಿನಲ್ಲಾದರೂ ಉತ್ತಮ ಮಳೆಯಾಗಿ ಭೂಮಿ ತಂಪಾಗಬೇಕು. ಅನ್ನದಾತರ ಸಂಕಷ್ಟ ದೂರವಾಗಿ ಅವರ ಕುಟುಂಬಗಳಲ್ಲಿ ನೆಮ್ಮದಿ ನೆಲೆಸಬೇಕು ಎಂದು ಭಕ್ತರು ಬೇಡಿಕೊಂಡರು.

ಮನುಷ್ಯರು ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳನ್ನು ಕ್ಷಮಿಸಿ, ವರುಣ ದೇವನ ಕೃಪೆಯಿಂದ ಧರೆಗೆ ಉತ್ತಮ ಮಳೆ ಸುರಿಯುವಂತೆ ಮಾಡಬೇಕು. ರೈತರ ಬದುಕಿನಲ್ಲಿ ಸಂತಸ ಮೂಡಿಸಿ, ಪ್ರತಿಯೊಂದು ಕುಟುಂಬಕ್ಕೂ ಸುಖ, ಶಾಂತಿ, ಆರೋಗ್ಯ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಕರುಣಿಸಬೇಕು ಎಂದು ಮಹಿಳೆಯರು ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದರು.

ದೇವಸ್ಥಾನದ ಆವರಣದಲ್ಲಿ ಬೆಳೆದಿರುವ ಓಂಕಾರ ರೂಪದ ಬನ್ನಿ ಮಂಟಪವು ಭಕ್ತರಲ್ಲಿ ವಿಶೇಷ ಆಕರ್ಷಣೆ ಮೂಡಿಸಿದೆ. ಶರನ್ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಬನ್ನಿ ಮಂಟಪದ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದಾರೆ.

ವಿಶೇಷ ಪೂಜೆಯ ನಂತರ ಮಹಿಳೆಯರು ಶ್ರೀ ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದು, ದೇವಸ್ಥಾನದ ಅರ್ಚಕರಾದ ಶಶಿಕುಮಾರ ಸ್ವಾಮಿ ಹಾಗೂ ವೀರೇಶ ಸ್ವಾಮಿ ಅವರಿಂದ ತೀರ್ಥಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಸೇವಕ ಹಾಗೂ ಪರಮಭಕ್ತ ಜಪಾನ ಶರಣಪ್ಪ ಸೇರಿದಂತೆ ಅನೇಕ ಸದ್ಭಕ್ತರು ಉಪಸ್ಥಿತರಿದ್ದರು.