ರಾಯಚೂರು ಅ. 16 (ಕರ್ನಾಟಕ ವಾರ್ತೆ): ಅಡುಗೆ ಸಿಬ್ಬಂದಿಗಳು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ನಿಗದಿತ ಸಮಯದಲ್ಲಿ ಪೌಷ್ಟಿಕ ಆಹಾರ ತಯಾರಿಸಿ, ಮಕ್ಕಳಿಗೆ ನೀಡಬೇಕೆಂದು ರಾಯಚೂರು ಸಹಾಯಕ ಆಯುಕ್ತರಾದ ಡಾ. ಹಂಪಣ್ಣ ಸಜ್ಜನ್ ಅವರು ಹೇಳಿದರು.

ಅಕ್ಟೋಬರ್ 16ರ ಶುಕ್ರವಾರದಂದು ರಾಯಚೂರು ನಗರದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ, ಪರಿಶಿಷ್ಟ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕ್ರೈಸ್ ವಸತಿ ಶಾಲೆಗಳ ಅಧೀನದಲ್ಲಿರುವ ಕಾಯಂ / ಹೊರಸಂಪನ್ಮೂಲ ಡಿ-ಗ್ರೂಪ್ ಸಿಬ್ಬಂದಿಗಳಿಗೆ ಅಡುಗೆ ತಯಾರಿಸುವ ಮತ್ತು ಸ್ವಚ್ಛತೆಯನ್ನು ಕಾಪಾಡುವ ಕುರಿತು ಎರಡನೇ ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು. ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿಕೊಂಡು, ತಲೆಗೆ ಕ್ಯಾಪ್ ಹಾಗೂ ಕೈಗವಸುಗಳನ್ನು ಧರಿಸಿ ಅಡುಗೆ ಮಾಡುವುದು ಉತ್ತಮ. ಶಾಲೆ ಅಥವಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಟಿಫಿನ್ ಮತ್ತು ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಸಿದ್ಧಪಡಿಸಬೇಕು. ಸಮಯ ಪಾಲನೆ ಮಾಡದಿದ್ದರೆ ಅಡುಗೆಯಲ್ಲಿ ವ್ಯತ್ಯಾಸವಾಗಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು ಅಥವಾ ದೂರುಗಳು ಬರುತ್ತವೆ ಎಂದರು.

ಪ್ರೀ-ಮೆಟ್ರಿಕ್ ಅಥವಾ ಪೋಸ್ಟ್ ಮೆಟ್ರಿಕ್ ನಿಲಯಗಳಲ್ಲಿ 50, 100, 200 ಹಾಗೂ 300 ಮಕ್ಕಳಿರುವಲ್ಲಿ ಅಡುಗೆ ಸಿಬ್ಬಂದಿ ಮಕ್ಕಳೊಂದಿಗೆ ಸೌಜನ್ಯದಿಂದ ಹಾಗೂ ಉತ್ತಮ ಸಂವಹನದಿಂದ ನಡೆದುಕೊಳ್ಳಬೇಕು. ಸಿಬ್ಬಂದಿ ಸರಿಯಾಗಿ ಸ್ಪಂದಿಸದಿದ್ದರೆ ಮಕ್ಕಳಿಂದ ದೂರುಗಳು ಬರುವ ಸಾಧ್ಯತೆ ಇರುತ್ತದೆ ಎಂದರು.

ನಿಲಯಗಳ ಸಿಬ್ಬಂದಿಗೆ ಯಾವುದೇ ಸಮಸ್ಯೆಗಳಿದ್ದರೂ ನಿಲಯ ಪಾಲಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ನಿವಾರಿಸಿಕೊಳ್ಳಲು ಅವಕಾಶವಿದೆ. ಮೂರು ದಿನಗಳ ತರಬೇತಿಯ ಮುಖ್ಯ ಉದ್ದೇಶವೆಂದರೆ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಸ್ವಚ್ಛವಾದ ಊಟವನ್ನು ಒದಗಿಸುವುದಾಗಿದೆ. ತರಬೇತಿ ಪಡೆದ ಬಳಿಕವೂ ನಿಯಮಗಳನ್ನು ಪಾಲಿಸದೆ ಲೋಪದೋಷಗಳು ಕಂಡುಬಂದಲ್ಲಿ ನೇರವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಮತ್ತು ಉತ್ತಮ ನಿರ್ವಹಣೆಗಾಗಿ ಅಧಿಕಾರಿಗಳು ನೀಡಿರುವ ಈ ಕಟ್ಟುನಿಟ್ಟಿನ ಸೂಚನೆಗಳನ್ನು ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಪಾಲಿಸಬೇಕಿದೆ ಎಂದರು.

ಈ ವೇಳೆ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಶರಣಬಸವ ಅವರು ಮಾತನಾಡಿ, ವಿದ್ಯಾರ್ಥಿ ನಿಲಯಗಳಲ್ಲಿ ಊಟ ತಯಾರಿಸುವಾಗ ಹಾಗೂ ವಿತರಿಸುವಾಗ ನಿರ್ಲಕ್ಷ್ಯ ತೋರಲಾಗುತ್ತಿದ್ದು, ನಿಗದಿತ ವೇಳೆಗೆ ಊಟ ಸಿಗದೆ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ದೂರುಗಳು ಬಂದಿದ್ದು, ಅಡುಗೆ ಮನೆ ಹಾಗೂ ಹಾಸ್ಟೆಲ್ ಆವರಣದಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಬೇಕು. ಯಾವುದೇ ಕಾರಣಕ್ಕೂ ಅಡುಗೆ ಸಿಬ್ಬಂದಿ ಅಥವಾ ವಾರ್ಡನ್‌ಗಳು ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಬಾರದು. ಅಲ್ಲದೆ, ಕೆಲವು ತಪ್ಪುಗಳು ಮರುಕಳಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದರು.

ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಹಾಗೂ ಕಟ್ಟುನಿಟ್ಟಿನ ಸ್ವಚ್ಛತೆಯನ್ನು ಕಾಪಾಡುವಂತೆ ಹೇಳಿದರು.

ಇದಕ್ಕೂ ಮುಂಚೆ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಗಳಿಗೆ ವಿವಿಧ ಗಣ್ಯರಿಂದ ಮಾಲಾರ್ಪಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ನಂದಿತಾ ಎಂ.ಎನ್., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾವಂತಗೇರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ತಿಮ್ಮರೆಡ್ಡಿ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರಾಂಶುಪಾಲರು, ನಿಲಯ ಪಾಲಕರು, ಅಡುಗೆ ಸಿಬ್ಬಂದಿಗಳು, ಸಹಾಯಕರು ಇದ್ದರು.