ರಾಯಚೂರು: ಯುವಜನತೆ ತಮ್ಮಲ್ಲಿ ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ನಾಯಕತ್ವ ಹಾಗೂ ಸಹಕಾರದ ಗುಣಗಳನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಿರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಹಾಗೂ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ಲಕ್ಷ್ಮಣ ಯಾದವ್ ಹೇಳಿದರು.
ರಾಯಚೂರಿನ ವೀರಶೈವ ಲಿಂಗಾಯತ ಸಮಾಜದ ಎಚ್.ಸಿ.ಎಂ.ಎಸ್.ಕೆ. ಪದವಿ ಮಹಾವಿದ್ಯಾಲಯದ ವತಿಯಿಂದ ಮನ್ಸಲಾಪುರ ಗ್ರಾಮದಲ್ಲಿ ಅಕ್ಟೋಬರ್ 18ರಂದು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಅರಿತು ಅವುಗಳ ಪರಿಹಾರಕ್ಕೆ ಕೈಜೋಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಜನರೊಂದಿಗೆ ಬೆರೆತು ಕೆಲಸ ಮಾಡುವ ಅವಕಾಶ ಕಲ್ಪಿಸುವುದರ ಜೊತೆಗೆ ಶಿಸ್ತು, ಸಮಯಪ್ರಜ್ಞೆ ಹಾಗೂ ಜವಾಬ್ದಾರಿಯುತ ಬದುಕಿನ ಮಹತ್ವವನ್ನು ತಿಳಿಸಿಕೊಡುತ್ತವೆ ಎಂದು ವಿವಿಧ ಉದಾಹರಣೆಗಳ ಮೂಲಕ ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾರ್ಟ್ಫುಲ್ ಲಿವಿಂಗ್ ಸಂಸ್ಥೆಯ ಯೋಗ ಶಿಕ್ಷಕ ಹಾಗೂ ಪತ್ರಿಕಾ ಛಾಯಾಗ್ರಾಹಕ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗಾಭ್ಯಾಸ ಮಹತ್ವದ ಪಾತ್ರ ವಹಿಸುತ್ತದೆ. ನಿಯಮಿತ ಯೋಗಾಭ್ಯಾಸದಿಂದ ಏಕಾಗ್ರತೆ, ಬೌದ್ಧಿಕ ಸಾಮರ್ಥ್ಯ, ಮಾನಸಿಕ ಸಮತೋಲನ ಹಾಗೂ ಶಿಸ್ತು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಿಬಿರದಲ್ಲಿ ಏಳು ದಿನಗಳ ಕಾಲ ವಿದ್ಯಾರ್ಥಿಗಳಿಗೆ ನೀಡಿದ ಯೋಗ ತರಬೇತಿಯ ಅನುಭವಗಳನ್ನು ಹಂಚಿಕೊಂಡ ಅವರು, ಯೋಗವನ್ನು ಕೇವಲ ಶಿಬಿರಕ್ಕೆ ಸೀಮಿತಗೊಳಿಸದೆ ನಿತ್ಯ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಸದಸ್ಯ ಪರ್ವತರೆಡ್ಡಿ ಅವರು ಶಿಬಿರದ ಚಟುವಟಿಕೆಗಳ ಕುರಿತು ಮಾತನಾಡಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶರಣಬಸಪ್ಪ ಅವರು ಏಳು ದಿನಗಳ ಶಿಬಿರದ ವರದಿ ಮಂಡಿಸಿದರು.
ಇದೇ ಸಂದರ್ಭದಲ್ಲಿ ಮನ್ಸಲಾಪುರ ಗ್ರಾಮದ ಪರಿಸರ ಪ್ರೇಮಿ ನರಸಿಂಹಲು ಅವರನ್ನು ಪರಿಸರ ಸಂರಕ್ಷಣೆಗೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಹಾಯಕ ಶಿಬಿರಾಧಿಕಾರಿ ಗಂಗಾಧರ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಶಿಬಿರಾಧಿಕಾರಿ ಈರಪ್ಪ ಸರ್ಜಾಪುರ, ಉಪನ್ಯಾಸಕರಾದ ಪದ್ಮಾವತಿ, ಅನ್ನಪೂರ್ಣ, ಟೀಕಪ್ಪ, ಅಜಯ್ ಕುಮಾರ್, ದೀಪಾ ಸೇರಿದಂತೆ ಎನ್ಎಸ್ಎಸ್ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



