ಮಾನ್ವಿ: ಪಟ್ಟಣದ ಪ್ರಸಿದ್ಧ ಶ್ರೀ ಕಲ್ಮಠದಲ್ಲಿ 51ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ಲೋಕಕಲ್ಯಾಣ ಹಾಗೂ ನಾಡಿನ ಸುಖಶಾಂತಿ, ಸಮೃದ್ಧಿಗಾಗಿ ಶ್ರೀ ಚಂಡಿಕಾ ಹೋಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ಶ್ರೀಮಠದ ಆವರಣದಲ್ಲಿ ನಡೆಯುತ್ತಿರುವ ಶ್ರೀದೇವಿ ಪುರಾಣ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಚಂಡಿಕಾ ಹೋಮದಲ್ಲಿ ಶ್ರೀಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪಾಲ್ಗೊಂಡು, ವೈದಿಕ ವಿಧಿವಿಧಾನಗಳೊಂದಿಗೆ ಹೋಮಕ್ಕೆ ಪೂರ್ಣಾಹುತಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಮತ್ತು ಶಾಸಕ ಹಂಪಯ್ಯ ನಾಯಕ ಅವರು ಶ್ರೀಮಠಕ್ಕೆ ಭೇಟಿ ನೀಡಿ, ಬೆಳ್ಳಿಯ ಶ್ರೀದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಗೌರವ ಸಮರ್ಪಿಸಿ ಆಶೀರ್ವಾದ ಪಡೆದರು.

ದಸರಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣವಾಗಿದ್ದು, ಚಂಡಿಕಾ ಹೋಮದಲ್ಲಿ ಮಾನ್ವಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಾಗವಹಿಸಿ ಶ್ರೀದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

51 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಶ್ರೀಮಠದ ದಸರಾ ಮಹೋತ್ಸವವು ಭಕ್ತರ ಶ್ರದ್ಧೆ, ನಂಬಿಕೆ ಹಾಗೂ ಧಾರ್ಮಿಕ ಪರಂಪರೆಯ ಪ್ರತೀಕವಾಗಿ ಮುಂದುವರಿದಿದ್ದು, ಈ ಬಾರಿಯ ಚಂಡಿಕಾ ಹೋಮವೂ ಭಕ್ತರ ಅಪಾರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.