ರಾಯಚೂರು: ನವರಾತ್ರಿ ಮಹೋತ್ಸವದ ಅಂಗವಾಗಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಲ್ತಾನಪುರ, ಆಸ್ಕಿಹಾಳ ಹಾಗೂ ಮಾರೆಮ್ಮ ಕ್ಯಾಂಪ್ಗಳಿಗೆ ಭೇಟಿ ನೀಡಿದ ಶಾಸಕ ಬಸನಗೌಡ ದದ್ದಲ್ ಅವರು, ಜಗನ್ಮಾತೆ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿಜಯದಶಮಿ ಹಾಗೂ ಆಯುಧ ಪೂಜೆಯ ಶುಭಾಶಯಗಳನ್ನು ಕ್ಷೇತ್ರದ ಜನತೆಗೆ ತಿಳಿಸಿದರು.
ಸುಲ್ತಾನಪುರ ಮಠದಲ್ಲಿ ಶ್ರೀ ಪಂಚಾಕ್ಷರಿ ಶ್ರೀ ಶಂಭು ಸೋಮನಾಥೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕರು, ಶ್ರೀಗಳ ಆಶೀರ್ವಾದ ಪಡೆದರು.
ಬಳಿಕ ಮಾತನಾಡಿದ ಶಾಸಕ ಬಸನಗೌಡ ದದ್ದಲ್, ಇಷ್ಟಲಿಂಗ ಪೂಜೆಯು ಭಕ್ತ ಮತ್ತು ಪರಮಾತ್ಮನ ನಡುವಿನ ನೇರ ಸಂಬಂಧವನ್ನು ಪ್ರತಿಬಿಂಬಿಸುವ ಆಧ್ಯಾತ್ಮಿಕ ಆಚರಣೆಯಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ದೈವತ್ವ ಅಡಗಿದ್ದು, ಅದನ್ನು ಅರಿತು ಸನ್ಮಾರ್ಗದಲ್ಲಿ ನಡೆಯುವಂತೆ ಇಷ್ಟಲಿಂಗ ಪೂಜೆ ಪ್ರೇರೇಪಿಸುತ್ತದೆ ಎಂದು ಹೇಳಿದರು.
ಮನುಷ್ಯನ ಬದುಕಿನಲ್ಲಿ ಸತ್ಯ, ಶುದ್ಧ ಮನಸ್ಸು, ದಯೆ, ಪ್ರಾಮಾಣಿಕತೆ, ಕಾಯಕ ಹಾಗೂ ದಾಸೋಹದಂತಹ ಮಾನವೀಯ ಮೌಲ್ಯಗಳಿಗೆ ವಿಶೇಷ ಸ್ಥಾನವಿದೆ. ಇಂತಹ ಆದರ್ಶಗಳನ್ನು ಕೇವಲ ಮಾತಿನಲ್ಲಿ ಹೇಳದೆ ನಿತ್ಯಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಧಾರ್ಮಿಕ ಆಚರಣೆಗಳು ಜನರಲ್ಲಿ ಸನ್ನಡತೆ, ಪರಸ್ಪರ ಪ್ರೀತಿ ಮತ್ತು ಸಾಮರಸ್ಯವನ್ನು ಬೆಳೆಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಬಸವಣ್ಣನವರು ಪ್ರತಿಪಾದಿಸಿದ ‘ಕಾಯಕವೇ ಕೈಲಾಸ’ ತತ್ವವು ಶ್ರಮದ ಮಹತ್ವವನ್ನು ಸಾರುತ್ತದೆ. ಯಾವುದೇ ವೃತ್ತಿಯನ್ನು ಕೀಳಾಗಿ ಕಾಣದೆ ಪ್ರಾಮಾಣಿಕತೆಯಿಂದ ದುಡಿಯುವುದು ಹಾಗೂ ದುಡಿಮೆಯ ಫಲದಲ್ಲಿ ಸಮಾಜದ ಒಳಿತಿಗೂ ಪಾಲು ನೀಡುವುದು ಶ್ರೇಷ್ಠ ಜೀವನ ಮೌಲ್ಯವಾಗಿದೆ. ಕಾಯಕ ಮತ್ತು ದಾಸೋಹದ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನವರಾತ್ರಿ ಹಾಗೂ ವಿಜಯದಶಮಿ ಹಬ್ಬಗಳು ದುಷ್ಟಶಕ್ತಿಗಳ ವಿರುದ್ಧ ಸತ್ಯ ಮತ್ತು ಧರ್ಮದ ವಿಜಯವನ್ನು ಸಾರುವ ಹಬ್ಬಗಳಾಗಿವೆ. ಈ ಹಬ್ಬಗಳು ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ತರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶಿವಪ್ಪ ನಾಯಕ, ಗ್ರಾಮದ ಹಿರಿಯರು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಭಕ್ತಾದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.



